ದೇಶ

ಪಂಜಾಬ್ ವಿಧಾನಸಭಾ ಚುನಾವಣೆ-2022: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Lingaraj Badiger

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ(ಎಎಪಿ) ಶುಕ್ರವಾರ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಲ್ಲಾ ಹತ್ತು ಅಭ್ಯರ್ಥಿಗಳು ಹಾಲಿ ಶಾಸಕರಾಗಿದ್ದು, ಅವರ ಪ್ರಸ್ತುತ ಸ್ಥಾನಗಳಿಂದಲೇ ಎಎಪಿ ಅವರನ್ನು ಕಣಕ್ಕಿಳಿಸಿದೆ.

ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಅವರನ್ನು ದಿರ್ಬಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಅವರ ಉಪನಾಯಕರಾದ ಸರವ್ಜಿತ್ ಕೌರ್ ಮನುಕೆ ಅವರು ಜಾಗ್ರಾನ್ ನಿಂದ ಸ್ಪರ್ಧಿಸಲಿದ್ದಾರೆ.

ಸುನಮ್‌ನಿಂದ ಅಮನ್ ಅರೋರಾ, ತಲ್ವಂಡಿ ಸಾಬೋದಿಂದ ಬಲ್ಜಿಂದರ್ ಕೌರ್, ಬುಧ್ಲಾಡಾದಿಂದ ಬುಧ್ರಾಮ್, ಬರ್ನಾಲಾದಿಂದ ಗುರ್ಮೀತ್ ಸಿಂಗ್ ಮೀತ್ ಹಯೆರ್, ಗರ್ಶಂಕರ್‌ನಿಂದ ಜೈ ಕಿಶನ್ ರೋರಿ, ಕೊಟ್ಕಾಪುರದಿಂದ ಕುಲತಾರ್ ಸಿಂಗ್ ಸಂಧ್ವಾನ್, ಮೆಹಲ್ ಕಲಾನ್‌ನಿಂದ ಕುಲ್ವಂತ್ ಪಂಡೋರಿ ಮತ್ತು ನಿಹಾಲ್ ಸಿಂಗ್ ಬಿಲಾಸ್‌ಪುರ್‌ನಿಂದ ಮಂಜೀತ್ ಸಿಂಗ್ ವ್ಲಾಸ್‌ಪುರ್ ಅವರಿಗೆ ಟಿಕೆಟ್​ ನೀಡಲಾಗಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತ್ತು. ಈ ಮೂಲಕ 10 ವರ್ಷಗಳ ನಂತರ SAD-BJP ಸರ್ಕಾರವನ್ನು ಸೋಲಿಸಲಾಯಿತು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿದಳ(ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು.

SCROLL FOR NEXT