ದೇಶ

ಬಿಟ್‌ಕಾಯಿನ್ ಹಗರಣ ಮುಚ್ಚಿಹಾಕಲು ಸಿಎಂ ಬೊಮ್ಮಾಯಿ ಯತ್ನ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ

Lingaraj Badiger

ನವದೆಹಲಿ: ಇದು ಭಾರತದ ಅತಿದೊಡ್ಡ ಬಿಟ್‌ಕಾಯಿನ್ ಹಗರಣ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕರ್ನಾಟಕದ ಬಿಜೆಪಿ ಸರ್ಕಾರವು ನ್ಯಾಯಯುತ ತನಿಖೆ ನಡೆಸುವ ಬದಲು “ಆಪರೇಷನ್ ಬಿಟ್‌ಕಾಯಿನ್ ಹಗರಣವನ್ನು ಮುಚ್ಚಿಹಾಕಲು” ಯತ್ನಿಸುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ. 

ಬಿಟ್‌ಕಾಯಿನ್ ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಈ ನಡುವೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೇವಾಲ ಅವರು, ಪ್ರಧಾನಿ ಮೋದಿ ಅವರು 760 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಈ ಹಗರಣದ ಸಮಗ್ರ ತನಿಖೆಗೆ ಆದೇಶ ನೀಡುವ ಬದಲು ‘ಈ ಕುರಿತ ಆರೋಪ ನಿರ್ಲಕ್ಷಿಸಿ’ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯಹಸ್ತ ನೀಡುವ ಮೂಲಕ ಇಡೀ ಹಗರಣವನ್ನೇ ಮುಚ್ಚಿಹಾಕುತ್ತಿದ್ದಾರೆ ಎಂದರು,

ಕದ್ದ ಬಿಟ್‌ಕಾಯಿನ್‌ಗಳನ್ನು ಹ್ಯಾಕರ್ ಆರೋಪಿ ಶ್ರೀಕೃಷ್ಣನ ವ್ಯಾಲೆಟ್‌ನಿಂದ ವರ್ಗಾಯಿಸಲಾಗಿದೆಯೇ ಎಂಬುದನ್ನು ಬಹಿರಂಗಪಡಿಸುವಂತೆ ಬೊಮ್ಮಾಯಿ ಸರ್ಕಾರಕ್ಕೆ ಸುರ್ಜೇವಾಲ ಒತ್ತಾಯಿಸಿದರು.

ಅಂತರಾಷ್ಟ್ರೀಯ ಮಟ್ಟದ ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದಾದ ಅತಿ ದೊಡ್ಡ ಹಗರಣ ಇದಾಗಿದ್ದರೂ, ಈ ಕುರಿತು ಕೇಂದ್ರ ಸರ್ಕಾರವು ತಕ್ಷಣವೇ ಇಂಟರ್ ಪೋಲ್‌ಗೆ ಮಾಹಿತಿ ನೀಡಿಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

"ಎಷ್ಟು ಬಿಟ್‌ಕಾಯಿನ್‌ಗಳು ಮತ್ತು ಯಾವ ಮೌಲ್ಯವನ್ನು ವರ್ಗಾಯಿಸಲಾಗಿದೆ? ಪೊಲೀಸ್ ವ್ಯಾಲೆಟ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾದ 31 ಮತ್ತು 186 ಬಿಟ್‌ಕಾಯಿನ್‌ಗಳು ಕಳೆದುಹೋಗಿವೆ ಅಥವಾ ನಕಲಿ ವಹಿವಾಟು ಎಂದು ಕಂಡುಬಂದಿದೆ ಎಂದು ಬೆಂಗಳೂರು ಪೊಲೀಸರು (22 ಜನವರಿ 2021 ರ ಮೂರನೇ ಪಂಚನಾಮದಲ್ಲಿ) ಹೇಗೆ ಸೂಚಿಸುತ್ತಾರೆ?" ಎಂದು ಪ್ರಶ್ನಿಸಿದರು.

ವಿಭಿನ್ನ ದೇಶಗಳ ಬಿಟ್ ಕಾಯಿನ್ ಎಕ್ಸ್‌ಚೇಂಜ್ ವೆಬ್‌ಸೈಟ್‌ಗಳ ಅಕೌಂಟ್‌ಗಳು ಹಾಗೂ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಯ ವೆಬ್‌ಸೈಟ್‌ಗಳಿಗೂ ಕನ್ನ ಹಾಕಿದ್ದಾಗಿ ತಿಳಿಸಿರುವ ಆರೋಪಿ, ಬಿಟ್ ಕಾಯಿನ್ ಕದ್ದಿದ್ದಾಗಿ ಒಪ್ಪಿದ್ದಾನೆ. ಆದರೆ, ಕೇಂದ್ರ ಹಾಗೂ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಹಗರಣದ ಪ್ರಮುಖ ಸಾಕ್ಷ್ಯಗಳನ್ನು ಮುಚ್ಚಿಟ್ಟಿದೆ ಎಂದು ಅವರು ಆರೋಪಿಸಿದರು.

ಒಟ್ಟು ಎಂಟು ಕಂಪೆನಿಗಳ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಕಂಪೆನಿಗಳ ಅಕೌಂಟ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಶ್ರೀಕೃಷ್ಣ ಹೇಳಿಕೆ ನೀಡಿದ್ದಾನೆ. ಪ್ರತಿ ಬಿಟ್ ಕಾಯಿನ್‌ನ ಮೊತ್ತ ಈಗ ಅಂದಾಜು ₹ 51 ಲಕ್ಷದಷ್ಟಿದೆ. ಎರಡು ಹ್ಯಾಕಿಂಗ್‌ ಮೂಲಕ ಅಂಥ ಒಟ್ಟು 5,000 ಬಿಟ್ ಕಾಯಿನ್ ಕದ್ದಿದ್ದಾಗಿ ಆರೋಪಿ ಹೇಳಿದ್ದು, ಇತರ ಆರು ಹ್ಯಾಕಿಂಗ್‌ ಮೂಲಕ ಎಷ್ಟು  ಬಿಟ್ ಕಾಯಿನ್ ಕದ್ದ ಎಂಬ ಮಾಹಿತಿ ದೊರೆತಿಲ್ಲ ಎಂದು ಅವರು ವಿವರ ನೀಡಿದರು.

SCROLL FOR NEXT