ದೇಶ

ರೆಸ್ಲರ್ ನಿಶಾ ದಹಿಯಾ ಕೊಲೆ ಪ್ರಕರಣ: ದೆಹಲಿ ಪೊಲೀಸರಿಂದ ಪ್ರಮುಖ ಆರೋಪಿಗಳ ಬಂಧನ

Srinivasamurthy VN

ನವದೆಹಲಿ: ಹರ್ಯಾಣದ ರೆಸ್ಲರ್ 21 ವರ್ಷದ ನಿಶಾ ದಹಿಯಾ ಮತ್ತು ಆಕೆಯ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪವನ್ ಮತ್ತು ಆತನ ಸಹಚರ ಸಚಿನ್ ಎಂದು ಗುರುತಿಸಲಾಗಿದೆ. ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ಇದೇ ಪವನ್ ಮತ್ತು ಸಚಿನ್ ಕೊಂದು ಪರಾರಿಯಾಗಿದ್ದರು ಎಂದು ಪೊಲೀಸ್ ಮೂಲಗಳ ತಿಳಿಸಿವೆ. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರು ಪಡಿಸಿದಾಗ ಕೋರ್ಟ್ ಹರ್ಯಾಣ ಪೊಲೀಸರ ವಶಕ್ಕೆ ಆರೋಪಿಗಳನ್ನು ನೀಡಿದೆ. ಪ್ರಮುಖ ಆರೋಪಿ ಪವನ್ ನಿಶಾ ದಹಿಯಾ ಅವರ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದೇ ಬುಧವಾರ ಅಂದರೆ ನವೆಂಬರ್ 10ರಂದು ಹರ್ಯಾಣದ ಸೋನಿಪತ್‌ ಜಿಲ್ಲೆಯ ಹಲಾಲ್‌ಪುರ ಗ್ರಾಮದ ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ತರಬೇತುದಾರ ಪವನ್ ಮತ್ತು ಸಚಿನ್ ಇತರರು ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೇ ಅಕಾಡೆಮಿ ಮೇಲೆ ದಾಳಿ ಮಾಡಿದ ಸ್ಥಳೀಯ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 65 ಕೆಜಿ ತೂಕದ ಕುಸ್ತಿಪಟು ನಿಶಾ ಮತ್ತು ಆಕೆಯ ಸಹೋದರ ಸೂರಜ್ ಅವರ ಮೃತದೇಹಗಳನ್ನು ಸೋನಿಪತ್‌ನ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಆಕೆಯ ತಾಯಿ ಧನಪತಿ ಗಾಯಗೊಂಡು ರೋಹ್ಟಕ್‌ನ ಪಿಜಿಐಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಆಕೆಯ ತಂದೆ ದಯಾನಂದ ದಹಿಯಾ ಅವರು ಸಿಆರ್‌ಪಿಎಫ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿದ್ದು, ಶ್ರೀನಗರದಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

SCROLL FOR NEXT