ದೇಶ

ಶೇ.92 ರಷ್ಟು ನೋಂದಾಯಿತ ಅನೌಪಚಾರಿಕ ವಲಯದ ಕೆಲಸಗಾರರ ಆದಾಯ 10 ಸಾವಿರ ರೂ. ಗಿಂತ ಕಡಿಮೆ

Nagaraja AB

ನವದೆಹಲಿ: ಹೊಸ ಮಾಹಿತಿ ಪ್ರಕಾರ ಇ- ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿತರಾದ ಸುಮಾರು ಶೇಕಡಾ 92 ರಷ್ಟು ಅನೌಪಚಾರಿಕ ವಲಯದ ಕೆಲಸಗಾರರ ತಿಂಗಳ ಆದಾಯ ರೂ. 10,000 ಅಥವಾ ಅದಕ್ಕಿಂತ ಕಡಿಮೆಯಾಗಿದೆ. ಇದರಲ್ಲಿ ನೋಂದಣಿಯಾದವರಲ್ಲಿ ಶೇಕಡಾ 72 ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗೆ ಸೇರಿದವರಾಗಿದ್ದಾರೆ.

ಇ- ಶ್ರಮ್ ಪೋರ್ಟಲ್ ದೇಶದಲ್ಲಿನ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಅಭಿವೃದ್ಧಿಯಲ್ಲಿ ನೆರವಾಗಲಿದೆ. 
ದೇಶದಲ್ಲಿನ ಸುಮಾರು 38 ಕೋಟಿ ಅಸಂಘಟಿತ ಕೆಲಸಗಾರರಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವ ಗುರಿಯೊಂದಿಗೆ ಆಗಸ್ಟ್ 26, 2021 ರಂದು ಇ- ಶ್ರಮ್ ಪೋರ್ಟಲ್ ಗೆ ಚಾಲನೆ ನೀಡಲಾಗಿತ್ತು.

ಇತ್ತೀಚಿನ ಮಾಹಿತಿ ಪ್ರಕಾರ, 8.01 ಕೋಟಿ ಅನೌಪಚಾರಿಕ ವಲಯದ ಕೆಲಸಗಾರರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿಯಾಗಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸಾಮಾಜಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ಬಡತನ ಸ್ಥಿತಿಯಲ್ಲಿಯೇ ಬದುಕುತ್ತಿರುವುದು ಕಂಡುಬಂದಿದೆ. 

ನೋಂದಣಿಯಾದ ಅನೌಪಚಾರಿಕ ಕೆಲಸಗಾರರಲ್ಲಿ ಶೇಕಡಾ 92.37 ರಷ್ಟು ಮಂದಿಯ ತಿಂಗಳ ಆದಾಯ 10 ಸಾವಿರ ಅಥವಾ ಅದಕ್ಕಿಂತ ಕಡಿಮೆಯಾಗಿದ್ದರೆ, ಶೇ. 5.58 ರಷ್ಟು ಮಂದಿಯ ತಿಂಗಳ ಆದಾಯ ರೂ. 10,001 ರಿಂದ 15,000 ಆಗಿದೆ. ಶೇ 40.44 ರಷ್ಟು ಒಬಿಸಿ, ಶೇ.23.76 ರಷ್ಟು ಎಸ್ ಸಿ ಮತ್ತು ಶೇ. 8.38 ರಷ್ಟು ಎಸ್ ಟಿ ಸೇರಿದಂತೆ ಶೇ 72.58 ರಷ್ಟು ನೋಂದಾಯಿತ ಕಾರ್ಮಿಕರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗಿಂತ ಹಿಂದೆ ಇರುವುದು ತಿಳಿದುಬಂದಿದೆ ಸಾಮಾನ್ಯ ವರ್ಗದ ಕೆಲಸಗಾರರ ಸಂಖ್ಯೆ ಶೇ. 27.41 ರಷ್ಟಿದೆ.

ನೋಂದಣಿಯಾದ ಶೇ. 86.58 ರಷ್ಟು ಕೆಲಸಗಾರರು ಪೋರ್ಟಲ್ ನಲ್ಲಿ ಬ್ಯಾಂಕ್ ಅಕೌಂಟ್ ವಿವರ ನೀಡಿದ್ದಾರೆ. ಇನ್ನೂ ವಯಸ್ಸಿನ ಆಧಾರದ ಮೇಲೆ ನೋಡುವುದಾದರೆ ನೋಂದಣಿಯಾದ ಶೇ. 61.4 ರಷ್ಟು ಕೆಲಸಗಾರರು 18 ರಿಂದ 40 ವರ್ಷದವರಾಗಿದ್ದಾರೆ ಶೇ. 22.24 ಮಂದಿ 40 ರಿಂದ 50 ವರ್ಷದವರಾಗಿದ್ದಾರೆ. ಶೇ. 12.59 ರಷ್ಟು ಮಂದಿ 50 ಕ್ಕೂ ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಶೇ. 3.77 ರಷ್ಟು ಕೆಲಸಗಾರರು 16 ರಿಂದ 18 ವರ್ಷದ ನಡುವಿನ ವಯಸ್ಸಿನವರಾಗಿದ್ದಾರೆ.

ಶೇ. 51.66 ರಷ್ಟು ಮಂದಿ ಮಹಿಳೆಯರು, ಶೇ. 48.34 ರಷ್ಟು ಪುರುಷರಾಗಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ , ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಯಾಗಿದ್ದಾರೆ. 

SCROLL FOR NEXT