ದೇಶ

ಜಮ್ಮು-ಕಾಶ್ಮೀರ: ಕುಲ್ಗಾಮ್ ನಲ್ಲಿ ಎರಡು ಪ್ರತ್ಯೇಕ ಎನ್ ಕೌಂಟರ್, ಐವರು ಉಗ್ರರು ಹತ

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಲ್ಗಾಂ ಜಿಲ್ಲೆಯ ಪೊಂಬೈ ಮತ್ತು ಗೋಪಾಲ್‌ಪೋರಾ ಗ್ರಾಮಗಳಲ್ಲಿ ಎನ್‌ಕೌಂಟರ್‌ಗಳು ನಡೆದಿದ್ದು, ಉಗ್ರರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ನಂತರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡಗಳು ಶೋಧಕಾರ್ಯ ಪ್ರಾರಂಭಿಸಿದವು.

ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್ ಆಗಿ ಮಾರ್ಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇಂದು ಒಟ್ಟು ಐವರು ಉಗ್ರರನ್ನು ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಾರತೀಯ ಸೇನೆಯಿಂದ ಎನ್​ಕೌಂಟರ್ ನಡೆಸಿ, ಹತ್ಯೆ ಮಾಡಲಾಗಿದೆ. ಪೊಂಬೈ ಮತ್ತು ಗೋಪಾಲ್​ಪುರ ಈ ಎರಡೂ ಗ್ರಾಮಗಳಲ್ಲಿ ಇನ್ನೂ ಭಾರತೀಯ ಸೇನೆಯಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ವರದಿಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಟಿಆರ್‌ಎಫ್‌ನ ಭಯೋತ್ಪಾದಕ ಕಮಾಂಡರ್ ಅಫಾಕ್ ಸಿಕಂದರ್ ಗೋಪಾಲ್‌ಪೋರಾದಲ್ಲಿ ಎನ್​ಕೌಂಟರ್​ಗೆ ಬಲಿಯಾಗಿದ್ದಾರೆ.

SCROLL FOR NEXT