ದೇಶ

ವಿವಾದಿತ 3 ಕೃಷಿ ಕಾಯ್ದೆಗಳ ಹಿಂಪಡೆದ ಕೇಂದ್ರ ಸರ್ಕಾರ: ಘಾಜಿಪುರ ಗಡಿಯಲ್ಲಿ ಸಿಹಿ ಹಂಚಿ ರೈತರ ಸಂಭ್ರಮ!

Manjula VN

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಘಾಜಿಪುರದಲ್ಲಿ ರೈತರು ಸಿಹಿ ಹಂಚಿ ಸಂಭ್ರಮವನ್ನಾಚರಿಸುತ್ತಿದ್ದಾರೆ.

ಉತ್ತರ ಪ್ರದೇಶ ಪ್ರವಾಸಕ್ಕೂ ಮುನ್ನ ಇಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಅವರು, ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.

ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ, ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ , ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು. ಆದರೆ ಅಂತಹ ಪವಿತ್ರವಾದ , ಸಂಪೂರ್ಣ ಶುದ್ಧವಾದ ರೈತರ ಅನುಕೂಲಕ್ಕಾಗಿ ನಾವು ಪ್ರಯತ್ನಿಸಿದರೂ ಅದನ್ನು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ರೈತರಿಗೆ ನೆರವಾಗುವ ಉದ್ದೇಶದಿಂದ ಹಾಗೂ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ಎಪಿಎಂಸಿ ಕಾಯ್ದೆಯನ್ನು ಮೋದಿ ಸರಕಾರ ಜಾರಿಗೊಳಿಸಲು ಚಿಂತನೆ ನಡೆಸಿತ್ತು. ಆದರೆ, ಒಂದು ವರ್ಗದ ರೈತರಿಂದ ಮೂಡಿ ಬಂದ ವಿರೋಧ ಹಾಗೂ ನಿರಂತರವಾಗಿ ದಿಲ್ಲಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳಿಂದ ಕೇಂದ್ರ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿರಬಹುದೆಂದು ವಿಶ್ಲೇಷಸಲಾಗುತ್ತಿದೆ. ಅಲ್ಲದೆ ಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಕೇಂದ್ರ ಸರಕಾರ.

ಇಂದು ಪವಿತ್ರ ಗುರುಪೂರಬ್ ದಿನವಾಗಿದ್ದು, ಈ ದಿನವೇ ಗುರು ನಾನಕ್ ಅವರನ್ನು ನೆನಪಿಸಿಕೊಂಡು ಮೋದಿ ಪಂಜಾಬ್‌ನಲ್ಲಿ ಹೆಚ್ಚು ವಿರೋಧ ವ್ಯಕ್ತವಾಗುತ್ತಿರುವ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ಒಂದೆಡೆ ಪ್ರಧಾನಿ ಮೋದಿಯವರು 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸುತ್ತಿದ್ದಂತೆಯೇ ಮತ್ತೊಂದೆಡೆ ಸುದೀರ್ಘವಾಗಿ ಪ್ರತಿಭಟನೆಗಿಳಿದಿದ್ದ ರೈತರು ಘಾಜಿಪುರ ಗಡಿ ಪ್ರದೇಶದಲ್ಲಿ ಸಂಭ್ರಮವನ್ನಾಚರಿಸುತ್ತಿದ್ದಾರೆ. ಕಿಸಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

SCROLL FOR NEXT