ದೇಶ

ವಾಯು ಮಾಲಿನ್ಯ: ನಿರ್ಮಾಣ ಮೇಲಿನ ನಿಷೇಧ ತೆರವುಗೊಳಿಸಿದ ದೆಹಲಿ ಸರ್ಕಾರ, ಶಾಲೆ ಪುನರಾರಂಭ ಕುರಿತು ಬುಧವಾರ ನಿರ್ಧಾರ

Nagaraja AB

ನವದೆಹಲಿ: ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಮಾಣ ಮತ್ತು  ಧ್ವಂಸ ಮಾಡುವ ಚಟುವಟಿಕೆಗಳ ಮೇಲಿನ ನಿಷೇಧವನ್ನು ದೆಹಲಿ ಸರ್ಕಾರ ತೆರವುಗೊಳಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಸೋಮವಾರ ತಿಳಿಸಿದ್ದಾರೆ.

ಬುಧವಾರ ನಡೆಯಲಿರುವ ಪರಾಮರ್ಶನಾ ಸಭೆಯಲ್ಲಿ ಶಾಲಾ, ಕಾಲೇಜುಗಳು ಮತ್ತಿತರ ಶೈಕ್ಷಣಿಕ ಸಂಸ್ಥೆಗಳ ಪುನರಾರಂಭ ಕುರಿತು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಪರಿಸ್ಥಿತಿಯಲ್ಲಿ ಸುಧಾರಣೆ ಮುಂದುವರೆದರೆ ಅವಶ್ಯಕವಲ್ಲದ ವಸ್ತುಗಳನ್ನು ಸಾಗಾಣಿಕೆ ಮಾಡುವ ಸಿಇನ್ ಜಿ ಆಪರೇಟೆಡ್ ಟ್ರಕ್ ಗಳು ದೆಹಲಿಯೊಳಗೆ ಪ್ರವೇಶ ಕುರಿತಂತೆಯೂ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾಯು ಮಾಲಿನ್ಯ ತಡೆ ಮತ್ತು ಅದರಿಂದಾಗುವ ಅನಾರೋಗ್ಯವನ್ನು ಕಡಿಮೆ ಮಾಡುವ ಸಲುವಾಗಿ ಅವಶ್ಯಕವಲ್ಲದ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳ ದೆಹಲಿ  ಪ್ರವೇಶ ಮತ್ತು ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ನಿಷೇಧವನ್ನು ನವೆಂಬರ್ 26 ರವರೆಗೆ ವಿಸ್ತರಿಸಿದೆ.

ಆದಾಗ್ಯೂ, ವಾಯು ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳಿಂದಾಗಿ ವಾಯು ಮಾಲಿನ್ಯ ಮಟ್ಟದಲ್ಲಿ ಗಣನೀಯ ರೀತಿಯಲ್ಲಿ ಇಳಿಕೆಯಾಗಿದೆ.  ವಾಯು ಗುಣಮಟ್ಟದಲ್ಲಿನ ಪ್ರಗತಿ ಹಾಗೂ ಕೆಲಸಗಾರರಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಯ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. 

ಎಲ್ಲಾ ಏಜೆನ್ಸಿಗಳಿಂದ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನ ಮೇಲ್ವಿಚಾರಣೆ ಮುಂದುವರೆಯಲಿದೆ. ಒಂದು ವೇಳೆ ಯಾವುದೇ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸರ್ಕಾರ ಕೆಲಸವನ್ನು ನಿಲ್ಲಿಸಲಿದೆ ಮತ್ತು ಯಾವುದೇ ನೋಟಿಸ್ ನೀಡದೆ ದಂಡ ವಿಧಿಸಲಿದೆ ಎಂದು ರಾಯ್ ಹೇಳಿದರು. 

SCROLL FOR NEXT