ದೇಶ

'3 ರಾಜಧಾನಿ ಮಸೂದೆ ಹಿಂಪಡೆತ': ಆಂಧ್ರ ಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ

Srinivasamurthy VN

ಅಮರಾವತಿ: ಆಂಧ್ರ ಪ್ರದೇಶ (Andhra Pradesh)ಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ವಿವಾದಾತ್ಮಕ ನಿರ್ಣಯವನ್ನು ಆಂಧ್ರ ಪ್ರದೇಶ ಸರ್ಕಾರ (Andhra Pradesh government) ಕೊನೆಗೂ ಹಿಂಪಡೆದಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ (CM Jagan Mohan Reddy) ಸರ್ಕಾರ 3 ರಾಜಧಾನಿ ಮಸೂದೆ(3 Capital Bill)ಯನ್ನು ಆಂಧ್ರ ಅಸೆಂಬ್ಲಿಯಲ್ಲಿ ಹಿಂದಕ್ಕೆ ಪಡೆದಿದೆ.

ಈ ಹಿಂದೆ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ಅಮರಾವತಿ(Amaravathi)ಯನ್ನು ರಾಜಧಾನಿಯಾಗಿ ಘೋಷಣೆ ಮಾಡಿ ಅಲ್ಲಿನ ರೈತರಿಂದ ಭಾರಿ ಪ್ರಮಾಣದ ಕೃಷಿ ಭೂಮಿಗಳನ್ನು ರಾಜಧಾನಿ ನಿರ್ಮಾಣಕ್ಕಾಗಿ ವಶಕ್ಕೆ ಪಡೆದಿದ್ದರು. ಅಲ್ಲದೆ ಹಲವಾರು ವಲಯಗಳ ಅಭಿವೃದ್ಧಿ ಕಾಮಗಾರಿ ಕೂಡ ನಡೆದಿತ್ತು. ಆದರೆ ಬಳಿಕ ಅಧಿಕಾರಕ್ಕೆ ಬಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿತ್ತು. ಈ ವಿವಾದಿತ ಮಸೂದೆಯಲ್ಲಿ ಕಾರ್ಯಕಾರಿ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗ ರಾಜಧಾನಿ ಕರ್ನೂಲ್ ಜಿಲ್ಲೆಯನ್ನು ಪ್ರಸ್ತಾಪಿಸಲಾಗಿತ್ತು.

ಆದರೆ ಈ ತ್ರಿವಿಧೀಕರಣ ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಅಮರಾವತಿ ರೈತರ ಮತ್ತು ಹಲವಾರು ವಲಯಗಳ ತೀವ್ರ ಪ್ರತಿರೋಧದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ರಾಜ್ಯ ಸರಕಾರವು ವಿವಾದಾತ್ಮಕ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯ ವಿಧಾನಸಭೆಯಲ್ಲಿ ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯಿದೆ.

ಹೈಕೋರ್ಟ್ ಗೆ ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್
ಇನ್ನು 3 ರಾಜಧಾನಿ ಮಸೂದೆಯನ್ನು ವಾಪಸ್ ಪಡೆದ ಕುರಿತು ಆಂಧ್ರ ಪ್ರದೇಶ ಸರ್ಕಾರದ ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ  ಮಾಹಿತಿ ನೀಡಿದ್ದು, 'ವಿಕೇಂದ್ರೀಕರಣ ಮಸೂದೆಯನ್ನು ಕ್ಯಾಬಿನೆಟ್ ರದ್ದುಗೊಳಿಸಿದ್ದು, ಸಿಆರ್ ಡಿಎ ರದ್ದತಿ ವಿಧೇಯಕಗಳನ್ನು ಕ್ಯಾಬಿನೆಟ್ ರದ್ದುಗೊಳಿಸಿದೆ ಎಂದರು. ಈ ಕುರಿತು ಇಂದು ವಿಧಾನಸಭೆಯಲ್ಲಿ ಸಿಎಂ ಜಗನ್ ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದ್ದು, ಮಸೂದೆ ಹಿಂಪಡೆದರೆ ಅಮರಾವತಿಯೇ ಆಂಧ್ರ ಪ್ರದೇಶದ ಪೂರ್ಣಪ್ರಮಾಣದ ರಾಜಧಾನಿಯಾಗಿ ಮುಂದುವರಿಯಲಿದೆ.  

ತುರ್ತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
ಮೂರು ರಾಜಧಾನಿಗಳ ವಿಚಾರವು ಕಳೆದ ಕೆಲವು ದಿನಗಳಿಂದ ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು. ಇಂದಿನ ಚರ್ಚೆಯ ಭಾಗವಾಗಿ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವಿಷಯವಾಗಿ ಆಂಧ್ರ ವಿಧಾನಸಭೆಯಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಕ್ಯಾಬಿನೆಟ್ ಸಭೆಯ ನಂತರ ರಾಜಧಾನಿ ವಿಚಾರವಾಗಿ ಯಾವೊಬ್ಬ ಸಚಿವರೂ ಕೂಡ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ ರಾಜಧಾನಿ ವಿಚಾರವಾಗಿ ವಿಧಾನಸಭೆಯಲ್ಲಿ ಖುದ್ದು ಸಿಎಂ ಜಗನ್ ಮೋಹನ್ ರೆಡ್ಡಿ ಅವರೇ ನಿರ್ಣಯ ಮಂಡಿಸಲಿದ್ದಾರೆ ಎಂದು ಸಚಿವ ಕೊಡಾಲಿ ನಾನಿ ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT