ದೇಶ

ನೇಪಾಳದಲ್ಲಿ ಯೋಗ ಗುರು ರಾಮ್ ದೇವ್ ಟಿವಿ ಚಾನಲ್; ಎದುರಾಯ್ತು ಆರೋಪ, ವಿರೋಧ! 

Srinivas Rao BV

ಕಠ್ಮಂಡು: ಯೋಗ ಗುರು ಬಾಬಾ ರಾಮ್ ದೇವ್ ಟಿ.ವಿ ಚಾನಲ್ ಗಳನ್ನು ನೇಪಾಳಕ್ಕೂ ವಿಸ್ತರಿಸಿದ್ದಾರೆ.
 
ಶುಕ್ರವಾರದಂದು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬ ಹಾಗೂ ಕಮ್ಯುನಿಸ್ಟ್ ಪಕ್ಷದ ನಾಯಕ ಪುಷ್ಪಕಮಲ್ ದಹಲ್ "ಪ್ರಚಂಡ", ಬಾಬಾ ರಾಮ್ ದೇವ್ ಅವರ ಆಸ್ತಾ ನೇಪಾಳ  ಚಾನಲ್ ಗಳನ್ನು ಲೋಕಾರ್ಪಣೆ ಮಾಡಿದ್ದರು. 

ಆದರೆ ಈಗ ಬಾಬಾ ರಾಮ್ ದೇವ್ ಅವರ ಚಾನಲ್ ಗಳು ನೇಪಾಳ ದೇಶದಲ್ಲಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಅಗತ್ಯವಿದ್ದ ಅನುಮತಿಯನ್ನು ಪಡೆದಿಲ್ಲ ಎಂಬ ಪ್ರಮುಖ ಆರೋಪ ಕೇಳಿಬಂದಿದೆ. 

ನೇಪಾಳದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಧಾನ ನಿರ್ದೇಶಕ ಗೋಗಾನ್ ಬಹದ್ದೂರ್ ಹಮಲ್ ಈ ಬಗ್ಗೆ ಮಾತನಾಡಿದ್ದು, ಈ ಎರಡೂ ಚಾನಲ್ ಗಳು ನೋಂದಣಿ ಪ್ರಕ್ರಿತೆಗೆ ಎಂದೂ ಮನವಿಯನ್ನೇ ಕೊಟ್ಟಿಲ್ಲ ಹಾಗೂ ಅದನ್ನು ಪ್ರಾರಂಭಿಸುವುದಕ್ಕೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿಲ್ಲ ಎಂದು ಹೇಳಿದ್ದಾರೆ.

"ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಈ ಚಾನಲ್ ಗಳನ್ನು ಪ್ರಾರಂಭಿಸಿದ್ದರೆ, ಖಂಡಿತವಾಗಿಯೂ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಹಮಲ್ ಪಿಟಿಐ ಗೆ ಮಾಹಿತಿ ನೀಡಿದ್ದಾರೆ. 

ಇದೇ ವೇಳೆ, ಸ್ಥಳೀಯ ಪತ್ರಕರ್ತರ ಸಂಘಟನೆಗಳ ಒಕ್ಕೂಟವೂ ರಾಮ್ ದೇವ್ ಅವರ ಚಾನಲ್ ಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಾಧ್ಯಮಗಳಲ್ಲಿ ವಿದೇಶಿ ಹೂಡಿಕೆಗಳಿಗೆ ದೇಶದ ಕಾನೂನು ಅನುಮತಿ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಪತಂಜಲಿ ಸಮೂಹ ಸಂಸ್ಥೆಗಳಿಂದ ಟಿ.ವಿ ಚಾನಲ್ ಗಳನ್ನು ಪ್ರಾರಂಭಿಸುತ್ತಿರುವುದು ದೇಶದ ಕಾನೂನಿಗೆ ವಿರುದ್ಧ ಎಂದು ಫೆಡರೇಷನ್ ಆಫ್ ನೇಪಾಳಿ ಜರ್ನಲಿಸ್ಟ್ಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. 

ಆದರೆ ಪತಂಜಲಿ ಯೋಗಪೀಠ, ನೇಪಾಳ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾವು ಸಿಆರ್ ಒ ದಿಂದ ಅಗತ್ಯ ಅನುಮತಿಗಳಿಗಾಗಿ ಮನವಿ ಮಾಡಿದ್ದೇವೆ ಹಾಗೂ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ ಇನ್ನೂ ಉಳಿದ ಇಲಾಖೆಗಳ ಅನುಮತಿ ಪಡೆಯುವುದಕ್ಕಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.
 
ನಾವು ಇನ್ನೂ ಚಾನಲ್ ಗಳ ಪ್ರಸಾರವನ್ನು ಪ್ರಾರಂಭಿಸಿಲ್ಲ. ಇದಕ್ಕಾಗಿ ತಾಂತ್ರಿಕ ಕೆಲಸಗಳನ್ನಷ್ಟೇ ಪ್ರಾರಂಭಿಸಿದ್ದೇವೆ.  ಟಿವಿ ಪ್ರಸಾರ ಕಚೇರಿಯನ್ನಷ್ಟೇ ನಾವು ಉದ್ಘಾಟಿಸಿದ್ದೇವೆ ಎಂದು ನೇಪಾಳದಲ್ಲಿರುವ ಪತಂಜಲಿ ಪೀಠ ತಿಳಿಸಿದೆ.

SCROLL FOR NEXT