ದೇಶ

ಓಮಿಕ್ರಾನ್ ರೂಪಾಂತರಿ: ಸೂಕ್ತ ಮುನ್ನೆಚ್ಚರಿಕೆ, ಜಾಗತಿಕ ಪ್ರಯಾಣ ನಿರ್ಬಂಧ ಪರಿಶೀಲನೆಗೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಓಮಿಕ್ರಾನ್ ಕೊರೋನಾ ರೂಪಾಂತರಿ ತಳಿಯ ಬಗ್ಗೆ ಮಾಹಿತಿ ಪಡೆದಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಜಾಗತಿಕ ಪ್ರಯಾಣ ನಿರ್ಬಂಧ ಸಡಿಲಿಕೆಯನ್ನು ಮರುಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಕೋವಿಡ್-19 ಪರಿಸ್ಥಿತಿಯ ಪರಿಶೂಲನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಕೊರೋನಾ ಪ್ರಕರಣಗಳ ಟ್ರೆಂಡ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಅಧಿಕಾರಿಗಳು, ಕೋವಿಡ್-19 ಪ್ರಾರಂಭವಾದಾಗಿನಿಂದಲೂ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ಹಲವು ಬಾರಿ ಕೋವಿಡ್-19 ಏರಿಳಿತವನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ ಎಂದು ಪಿಎಂಒ ಹೇಳಿದೆ.

ಇದನ್ನೂ ಓದಿ: ಕೋವಿಡ್-19 ಲಸಿಕೆ: ಪರಿಸ್ಥಿತಿ ಪರಿಶೀಲನೆಗೆ ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ
 
ಈ ವೇಳೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ, ಬೊಟ್ಸ್ವಾನಾ, ಹಾಂಕಾಂಗ್, ಇಸ್ರೇಲ್ ಹೀಗೆ ನಾಲ್ಕೈದು ದೇಶಗಳಲ್ಲಿ B.1.1.529 ಓಮಿಕ್ರಾನ್(Omicron) ಎಂಬ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಭಾರತದ ಮೇಲೆ ಇವುಗಳ ಪರಿಣಾಮವನ್ನೂ ಚರ್ಚೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. 

ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ್ದು, ಜನತೆ ಹೆಚ್ಚು ಜಾಗರೂಕರಾಗಿರಬೇಕು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಎಂದು ಕರೆ ನೀಡಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ. 

ಅಂತಾರಾಷ್ಟ್ರೀಯ ವಿಮಾನದಲ್ಲಿ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆಯೂ ನಿಗಾ ವಹಿಸಬೇಕು ಪ್ರಮುಖವಾಗಿ ಅಪಾಯ ಎಂದು ಗುರುತಿಸಲಾಗಿರುವ ದೇಶಗಳಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಮೋದಿ ಹೇಳಿದ್ದಾರೆ. 

ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ. ವಿ.ಜೆ ಪೌಲ್ ಭಾಗಿಯಾಗಿದ್ದರು.

SCROLL FOR NEXT