ದೇಶ

ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'ಗೋಡ್ಸೆ ಜಿಂದಾಬಾದ್': ದೇಶಕ್ಕೆ ಅವಮಾನ ಎಂದ ಬಿಜೆಪಿ ಸಂಸದ ವರುಣ್ ಗಾಂಧಿ

Lingaraj Badiger

ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಅವರು, ಬೇಜವಾಬ್ದಾರಿಯಿಂದ ಇಡೀ ದೇಶ ನಾಚಿಕೆಪಡುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

"ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆದರೆ ಮಹಾತ್ಮರು ತಮ್ಮ ಅಸ್ತಿತ್ವದ ಮೂಲಕ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಶಕ್ತಿಗೆ ಭದ್ರ ಬುನಾದಿ ಹಾಕಿದರು. ಅದು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದೆ. 'ಗೋಡ್ಸೆ ಜಿಂದಾಬಾದ್' ಎಂದು ಟ್ವೀಟ್ ಮಾಡುವುದು ಬೇಜವಾಬ್ದಾರಿಯಿಂದ ಕೂಡಿದ್ದು, ರಾಷ್ಟ್ರವನ್ನು ಅವಮಾನಿಸುತ್ತಿದ್ದಾರೆ" ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ 'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಟ್ರೆಂಡಿಂಗ್ ಆಗಿದ್ದು, ಭಾರೀ ವಿವಾದ ಭುಗಿಲೆದ್ದಿದೆ. ವರುಣ್ ಗಾಂಧಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

1948ರ ಜನವರಿ 30 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ತಪ್ಪಿನ ಶಿಕ್ಷೆಯಾಗಿ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು. ಭಾರತ ವಿಭಜನೆಗೆ ಗಾಂಧಿಯೇ ಕಾರಣವೆಂದು ಗೋಡ್ಸೆ ದೂಷಿಸುತ್ತಿದ್ದರು.

SCROLL FOR NEXT