ದೇಶ

ಛತ್ತೀಸ್ ಗಢ ಸಿಎಂ ಸ್ಥಾನದಲ್ಲಿ ಭೂಪೇಶ್ ಬಘೇಲ್ ಮುಂದುವರೆಯಲಿದ್ದಾರೆ: ಗೃಹ ಸಚಿವ

Srinivas Rao BV

ರಾಯ್ ಪುರ: ಛತ್ತೀಸ್ ಗಢ ಸಿಎಂ ಸ್ಥಾನದಲ್ಲಿ ಭೂಪೇಶ್ ಬಘೇಲ್ ಮುಂದುವರೆಯಲಿದ್ದಾರೆ ಎಂದು ರಾಜ್ಯದ ಗೃಹ ಸಚಿವ ತಾಮ್ರಧ್ವಜ್ ಸಾಹು ಹೇಳಿದ್ದಾರೆ. 

ಪಂಜಾಬ್ ಸಿಎಂ ಬದಲಾವಣೆಯಾದ ಬೆನ್ನಲ್ಲೇ ಛತ್ತೀಸ್ ಗಢ ಸಿಎಂ ಬದಲಾವಣೆಯೂ ಸಾಧ್ಯ ಎಂಬ ಬಗ್ಗೆ ಊಹಾಪೋಹಗಳಿದ್ದವು.

ಊಹಾಪೋಹಗಳ ಪ್ರಕಾರ ಸಿಎಂ ರೇಸ್ ನಲ್ಲಿ ಗೃಹ ಸಚಿವ ಸಾಹು ಮುಂಚೂಣಿಯಲ್ಲಿದ್ದರು. ಆದರೆ ಈಗ ಸ್ವತಃ ಅವರೇ ಭೂಪೇಶ್ ಬಘೇಲ್ ಸಿಎಂ ಸ್ಥಾನದಲ್ಲೇ ಮುಂದುವರೆಯಲಿದ್ದಾರೆ ಎಂದು ಹೇಳಿದ್ದು ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

ಈ ವರೆಗೂ ಭೂಪೇಶ್ ಬಘೇಲ್ ಸಿಎಂ ಸ್ಥಾನದಲ್ಲಿದ್ದಾರೆ, ಅವರು ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಗೌರೆಲ್ಲಾ-ಪೆಂದ್ರ-ಮಾರ್ವಾಹಿ (ಜಿಪಿಎಂ) ಜಿಲ್ಲೆಯಲ್ಲಿ ಮಾತನಾಡಿದ ಸಾಹು ಹೇಳಿದ್ದಾರೆ. 2021 ರ ಜೂನ್ ನಲ್ಲಿ ಭೂಪೇಶ್ ಬಘೇಲ್ 2 ವರೆ ವರ್ಷ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಯ ಊಹಾಪೋಹಗಳಿದ್ದವು.

2018 ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆಯ ಭರವಸೆಯನ್ನು ನೀಡಿತ್ತು. ಈ ಒಪ್ಪಂದದ ಪ್ರಕಾರ ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವೊ ಅವರಿಗೆ ಸಿಎಂ ಹುದ್ದೆ ನೀಡಬೇಕಾಗಿತ್ತು. ಆದರೆ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ಪಿಎಲ್ ಪುನಿಯಾ 2018 ರಲ್ಲಿ ಇಂತಹ ಯಾವುದೇ ಒಪ್ಪಂದಗಳೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT