ದೇಶ

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಖ್ಯಾತ ನಿರ್ದೇಶಕ ಶಂಕರ್ ಅಳಿಯನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲು

Lingaraj Badiger

ಚೆನ್ನೈ: 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ಎಸ್ ಶಂಕರ್ ಅವರ ಅಳಿಯನ ವಿರುದ್ಧ ಪೋಕ್ಸೋ(ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಜೆಂಟಲ್‌ಮನ್, ಜೀನ್ಸ್ ನಿರ್ದೇಶಕನ ಅಳಿಯ ಮತ್ತು ಕ್ರಿಕೆಟ್ ಕ್ಲಬ್‌ನ ನಾಯಕ ರೋಹಿತ್ ದಾಮೋದರನ್ ಅವರ ವಿರುದ್ಧ ಪೋಕ್ಸ್ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿಯಾಗಿರುವ ರೋಹಿತ್ ಅವರ ತಂದೆ ದಾಮೋದರನ್, ಕ್ರಿಕೆಟ್ ತರಬೇತುದಾರ ತಾಮರೈ ಕಣ್ಣನ್ ಮತ್ತು ಇತರ ಇಬ್ಬರು ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂತ್ರಸ್ತ ಬಾಲಕಿ ಮಂಗಳವಾರ ಪುದುಚೇರಿಯ ಮೆಟ್ಟುಪಾಳ್ಯಂ ಪೊಲೀಸರಿಗೆ ದೂರು ನೀಡಿದ್ದು, ಕ್ರಿಕೆಟ್ ತರಬೇತಿಗೆ ಹೋಗಿದ್ದ ಹುಡುಗಿಗೆ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. 

ದೂರು ನೀಡಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ ಸಂತ್ರಸ್ತೆ, ಬಾಲಕಿಯರ ಕಲ್ಯಾಣ ಸಮಿತಿಗೆ ಪತ್ರ ಬರೆದಿದ್ದರು.

ನಿರ್ದೇಶಕ ಶಂಕರ್ ಅವರ ಹಿರಿಯ ಪುತ್ರಿ ಐಶ್ವರ್ಯ ಈ ವರ್ಷದ ಜೂನ್ ನಲ್ಲಿ ಚೆನ್ನೈನಲ್ಲಿ ರೋಹಿತ್ ದಾಮೋದರನ್ ಅವರನ್ನು ವಿವಾಹವಾಗಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ರೋಹಿತ್ ವಿವಾಹದಲ್ಲಿ ಭಾಗವಹಿಸಿದ್ದರು.

SCROLL FOR NEXT