ದೇಶ

ಕಾಶ್ಮೀರಕ್ಕೆ ಅಮಿತ್ ಶಾ ಭೇಟಿ: ಕೆಲ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತ, ಹಲವು ದ್ವಿಚಕ್ರ ವಾಹನ ಜಪ್ತಿ

Lingaraj Badiger

ಶ್ರೀನಗರ: ಈ ವಾರಾಂತ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಣಿವೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದಾರೆ.

ಶನಿವಾರ ಶ್ರೀನಗರದಿಂದ ಶಾರ್ಜಾಗೆ ಮೊದಲ ಅಂತಾರಾಷ್ಟ್ರೀಯ ವಿಮಾನಕ್ಕೆ ಚಾಲನೆ ನೀಡಲಾಗುತ್ತಿದೆ. ಈ ವೇಳೆ ಅಮಿತ್ ಶಾ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಆದಾಗ್ಯೂ, ಪೊಲೀಸ್ ಅಧಿಕಾರಿಗಳು ಇಂಟರ್ನೆಟ್ ಸ್ಥಗಿತಗೊಳಿಸಿರುವುದಕ್ಕು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವುದಕ್ಕೂ ಅಮಿತ್ ಶಾ ಅವರ ಭೇಟಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯ ಭಯೋತ್ಪಾದನಾ ವಿರೋಧಿ ಕ್ರಮಗಳ ಭಾಗವಾಗಿದೆ ಎಂದು ಹೇಳಿದ್ದಾರೆ.

"ಕೆಲವು ಬೈಕುಗಳನ್ನು ವಶಪಡಿಸಿಕೊಳ್ಳುವುದು ಮತ್ತು ಕೆಲವು ಟವರ್‌ಗಳ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದು ಸಂಪೂರ್ಣವಾಗಿ ಭಯೋತ್ಪಾದನೆ ಮತ್ತು ಹಿಂಸೆಗೆ ಸಂಬಂಧಿಸಿದ ಕ್ರಮಗಳಾಗಿವೆ. ಕೇಂದ್ರ ಗೃಹ ಸಚಿವರ ಭೇಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ವಾರ ಉಗ್ರರು ಹಲವು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಒಂದು ಡಜನ್ ಟವರ್‌ಗಳ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಪೊಲೀಸರು ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ದಾಖಲೆಗಳ ಕಠಿಣ ತಪಾಸಣೆ ನಡೆಸಲು ಆರಂಭಿಸಿದ್ದಾರೆ.

ಹಲವು ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ದಾಖಲೆಗಳನ್ನು ಸಹ ಪರಿಶೀಲಿಸದೆ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಅಕ್ಟೋಬರ್ 26ರ ನಂತರ ತಮ್ಮ ವಾಹನಗಳನ್ನು ಹಿಂಪಡೆಯುವಂತೆ ಕೇಳಿಕೊಂಡಿರುವುದಾಗಿ ಹೇಳಿದ್ದಾರೆ.

SCROLL FOR NEXT