ದೇಶ

ಹರಿಯಾಣ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆದಿದೆ: ಮನೋಹರ್ ಲಾಲ್ ಖಟ್ಟರ್ ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಹಾಡಿ ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಐದು ದಶಕಗಳಲ್ಲಿ ರಾಜ್ಯ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆದಿದೆ ಎಂದಿದ್ದಾರೆ.

ಜಜ್ಜರ್ ಜಿಲ್ಲೆಯ ಬಡ್ಸಾ ಪ್ರದೇಶದಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಇನ್ಫೋಸಿಸ್ ಫೌಂಡೇಶನ್ ವಿಶ್ರಮ್ ಸದನ್ ಉದ್ಘಾಟನೆಯ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, "ಹರಿಯಾಣದಲ್ಲಿ ಬಹಳ ಸಮಯಗಳಿಂದ ನಾನು ಅನೇಕ ಸರ್ಕಾರಗಳ ಕೆಲಸವನ್ನು ಹತ್ತಿರದಿಂದ ಗಮನಿಸಿದ್ದೇನೆ, ಆದರೆ ಕಳೆದ ಹಲವು ದಶಕಗಳಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಹರಿಯಾಣ ಅತ್ಯಂತ ಪ್ರಾಮಾಣಿಕ ಸರ್ಕಾರವನ್ನು ಪಡೆದುಕೊಂಡಿದೆ” ಎಂದರು.

ಆರ್ ಎಸ್ಎಸ್ ಪ್ರಚಾರಕರಾಗಿದ್ದ ಖಟ್ಟರ್ ಅವರು ಸಹ ಮೋದಿಯಂತೆ ಬಿಜೆಪಿಗೆ ಸೇರಿದ್ದು ತಮಗೆ ಗೊತ್ತು ಎಂದು ಹೇಳಿದ ಪ್ರಧಾನಿ, ಹಲವು ವರ್ಷಗಳಿಂದ ಅವರ ಪ್ರತಿಭೆ ಮುಖ್ಯಮಂತ್ರಿಯಾಗಿ ಮುಂಚೂಣಿಗೆ ಬಂದಿದೆ ಮತ್ತು ಅವರು ಕೇಂದ್ರದೊಂದಿಗೆ ಸಮರ್ಪಣೆ ಮತ್ತು ನಾವೀನ್ಯತೆಯೊಂದಿಗೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಹರಿಯಾಣ ಸರ್ಕಾರದ ಕೆಲವು ಕಾರ್ಯಕ್ರಮಗಳ ಮಾದರಿಯನ್ನು ಅಳವಡಿಸಿಕೊಂಡಿದೆ ಎಂದು ಮೋದಿ ತಿಳಿಸಿದರು.

ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ತೆಗೆದುಹಾಕಿದ ಬಿಜೆಪಿ ಹೈಕಮಾಂಡ್ ಕೇಸರಿ ಪಕ್ಷ ಆಡಳಿತವಿರುವ ಇತರ ರಾಜ್ಯಗಳಲ್ಲೂ ನಾಯಕತ್ವ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿರುವ ಸಮಯದಲ್ಲೇ ಮೋದಿ ಖಟ್ಟರ್ ಅವರನ್ನು ಸಾರ್ವಜನಿಕವಾಗಿಯೇ ಪ್ರಶಂಸಿರುವುದು ಹರಿಯಾಣ ಸಿಎಂಗೆ ಮತ್ತಷ್ಟು ಬಲ ಬಂದಂತಾಗಿದೆ.

SCROLL FOR NEXT