ದೇಶ

ಆರ್ಟಿಕಲ್ 370 ರದ್ಧತಿ ಬಳಿಕ ಕಾಶ್ಮೀರಕ್ಕೆ ಅಮಿತ್ ಶಾ ಮೊದಲ ಭೇಟಿ; ಹುತಾತ್ಮ ಪೊಲೀಸ್ ಅಧಿಕಾರಿ ಕುಟುಂಬಸ್ಥರಿಗೆ ಸಾಂತ್ವನ

Srinivasamurthy VN

ಶ್ರೀನಗರ: 2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ವೇಳೆ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೈಜ್ ಅವರ ಮನೆಗೆ ಭೇಟಿ ನೀಡಿದರು.

ಶನಿವಾರ ಬೆಳಗ್ಗೆ ಕಾಶ್ಮೀರಕ್ಕೆ ಆಗಮಿಸಿದ ಅಮಿತ್ ಶಾ ಇಂದು ಈ ವರ್ಷದ ಆರಂಭದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಪೊಲೀಸ್ ಅಧಿಕಾರಿ ಇನ್ಸ್‌ಪೆಕ್ಟರ್ ಪರ್ವೈಜ್ ಅವರ ಕುಟುಂಬವನ್ನು ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರ್ವೈಜ್ ಅಹ್ಮದ್ ಜೂನ್ 22 ರಂದು ಸಂಜೆ ಪ್ರಾರ್ಥನೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನೌಗಾಮ್‌ನಲ್ಲಿರುವ ಅವರ ಮನೆಯ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಪರ್ವೈಜ್ ಅಹ್ಮದ್ ಸಾವನ್ನಪ್ಪಿದ್ದರು. 

ಅಧಿಕಾರಿ ಪತ್ನಿಗೆ ಸರ್ಕಾರಿ ಉದ್ಯೋಗ
ಇದೇ ವೇಳೆ ಹುತಾತ್ಮ ಪೊಲೀಸ್ ಅಧಿಕಾರಿಯ ವಿಧವೆ ಪತ್ನಿ ಫಾತಿಮಾ ಅಖ್ತರ್‌ ಅವರಿಗೆ ಸಹಾನುಭೂತಿಯ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೇಮಕಾತಿಯ ದಾಖಲೆಗಳನ್ನು ಅಮಿತ್ ಶಾ ಅವರು ನೀಡಿದರು.

ತಮ್ಮ ಪ್ರವಾಸದಲ್ಲಿ ಅಮಿತ್ ಶಾ ಅವರು ಜಮ್ಮುವಿನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂತೆಯೇ ಕೇಂದ್ರಾಡಳಿತ ಪ್ರದೇಶದಲ್ಲಿ ಕಣಿವೆಯ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ ಶ್ರೀನಗರ-ಶಾರ್ಜಾ ವಿಮಾನಯಾನ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಅಂತೆಯೇ ಇಲ್ಲಿನ ಯೂತ್ ಕ್ಲಬ್ ಸದಸ್ಯರೊಂದಿಗೂ ಅವರು ಸಂವಾದ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಟಿಕಲ್ 370 ರದ್ಧತಿ ಬಳಿಕ ಮೊದಲ ಭೇಟಿ
ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5, 2019 ರಂದು ಹಿಂತೆಗೆದುಕೊಂಡ ನಂತರ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ. ಶಾ ಅವರ ಭೇಟಿಗೆ ಮುನ್ನ ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿಶೇಷವಾಗಿ ನಗರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.  ಹೆಚ್ಚುವರಿ ಅರೆಸೇನಾ ಪಡೆಗಳ ಐವತ್ತು ಕಂಪನಿಗಳು, ಸುಮಾರು 5,000 ಸೈನಿಕರನ್ನು ಕಣಿವೆಗೆ ಸೇರಿಸಲಾಗುತ್ತಿದೆ. ಸಿಆರ್‌ಪಿಎಫ್ ಪಡೆಗಳ ಬಂಕರ್‌ಗಳು ನಗರದ ಹಲವು ಪ್ರದೇಶಗಳಲ್ಲಿ ಹಾಗೂ ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT