ದೇಶ

ಕಣಿವೆ ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನರನ್ನು ಕಡೆಗಣಿಸುವ ಕಾಲ ಮುಗಿದಿದೆ: ಅಮಿತ್‌ ಶಾ

Srinivasamurthy VN

ಜಮ್ಮು: ಕಣಿವೆ ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ಜಮ್ಮುವಿನಲ್ಲಿ ಜನರನ್ನು ಕಡೆಗಣಿಸುವ ಕಾಲ ಮುಗಿದಿದೆ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಹಿಂಪಡೆದ ಬಳಿಕ ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇಂದು ಭಗವತಿ ನಗರ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು‌, ಜಮ್ಮುವಿನಲ್ಲಿ ಜನರನ್ನು ಕಡೆಗಣಿಸುವ ಕಾಲ ಮುಗಿದಿದ್ದು, ಇದೀಗ ಜಮ್ಮು ಮತ್ತು ಕಾಶ್ಮೀರ ಒಟ್ಟಾಗಿ ಅಭಿವೃದ್ಧಿ ಸಾಧಿಸಲಿವೆ ಎಂದು ಹೇಳಿದರು.

'ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಯಾರೊಬ್ಬರೂ ತಡೆಯೊಡ್ಡಲಾರರು. ಕೇಂದ್ರಾಡಳಿತ ಪ್ರದೇಶದಲ್ಲಿ ಈಗಾಗಲೇ 12,000 ರೂ ಕೋಟಿ ಹೂಡಿಕೆ ಮಾಡಲಾಗಿದೆ. 2022ರ ಅಂತ್ಯದ ವೇಳೆಗೆ 51,000 ಕೋಟಿ ರೂ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕಣಿವೆಯಲ್ಲಿ ಗಲಭೆ ಮತ್ತು ಉಗ್ರರ ದಾಳಿಯಿಂದ ಯಾರೊಬ್ಬರ ಜೀವಕ್ಕೂ ಅಪಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶ. ಯುವಕರು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೈ ಜೋಡಿಸಿದರೆ, ಉಗ್ರರ ದುಷ್ಟ ಸಂಚುಗಳು ವಿಫಲವಾಗಲಿವೆ ಎಂದು ಹೇಳಿದರು.

ಇದೇ ವೇಳೆ ಕಾಶ್ಮೀರ ರಾಜಕೀಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, '70 ವರ್ಷಗಳ ಕಾಲ ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಏನು ಕೊಟ್ಟವು. 87 ಶಾಸಕರು, 6 ಸಂಸದರು ಮಾತ್ರ. ಆದರೆ 30,000 ಜನರನ್ನು ಚುನಾಯಿತ ಪ್ರತಿನಿಧಿಗಳನ್ನಾಗಿ ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಪ್ರತಿ ಹಳ್ಳಿಗೊಂದು ಪಂಚಾಯತ್ ರಚನೆಯಾಗಿದೆ... ಈಗ ಈ ಮೂರು ಕುಟುಂಬಗಳ 'ದಾದಾಗಿರಿ' ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಅಮಿತ್ ಶಾ ಅವರು ಮೂರು ದಿನಗಳ ಭೇಟಿ ಸಲುವಾಗಿ ಶನಿವಾರ ಇಲ್ಲಿಗೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿ ಉಗ್ರರು ಸರಣಿ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಗೃಹ ಸಚಿವರು ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
 

SCROLL FOR NEXT