ದೇಶ

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ. ಆಸ್ಪತ್ರೆಗೆ ದಾಖಲು

Manjula VN

ಲಖಿಂಪುರ್ ಖೇರಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಅವರ ಪುತ್ರ ಆಶಿಶ್ ಮಿಶ್ರಾ ಡೆಂಗ್ಯೂ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಜೈಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಶುಕ್ರವಾರ ಜ್ವರದಿಂದ ಬಳಲುತ್ತಿರುವುದಾಗಿ ಮಿಶ್ರಾ ಹೇಳಿದ್ದರು. ಆ ಬಳಿಕ ಅವರ ರಕ್ತದ ತಪಾಸಣೆ ನಡೆಸಿದಾಗ ಡೆಂಗ್ಯೂವಿನಿಂದ ಬಳಲುತ್ತಿರುವುದು ಖಾತ್ರಿಯಾಗಿದೆ. ಹೀಗಾಗಿ ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಅವರನ್ನು ಜೈಲಾಸ್ಪತ್ರೆಗೆ ಸೇರಿಸಲಾಗಿದೆ.

ಲಖಿಂಪುರ್ ಖೇರಿ ಎಂಬಲ್ಲಿನ ಟಿಕುನಿಯ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಆಶಿಶ್ ಮಿಶ್ರಾ ಅವರು ಕಾರು ಹರಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯಲ್ಲಿ ನಾಲ್ವರು ರೈತರು ಅಸುನೀಗಿದ್ದರು. ರಾಷ್ಟ್ರವ್ಯಾಪಿ ಸಂಚಲನಕ್ಕೆ ಕಾರಣವಾದ ಪ್ರಕರಣದ ಬಳಿಕ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದರು.

ಅಕ್ಟೋಬರ್‌ 3ರಂದು ಲಖಿಂಪುರ್‌ದಲ್ಲಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದತಿಗೆ ಆಗ್ರಹಿಸಿ ಹಾಗು ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಕೇಂದ್ರ ಆಶಿಶ್‌ ಮಿಶ್ರಾ ಅವರ ಕಾರು ರೈತರ ಮೈಮೇಲೆಯೇ ಹರಿದಿತ್ತು. ಈ ದುರ್ಘಟನೆ ನಡೆದ ಬಳಿಕ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪರಿಣಾಮ, ಇಬ್ಬರು ಬಿಜೆಪಿ ಕಾರ್ಯಕರ್ತರು ಒಬ್ಬ ಚಾಲಕ ಹಾಗು ಓರ್ವ ಪತ್ರಕರ್ತ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಸೇರಿದಂತೆ ಇಲ್ಲಿಯವರೆಗೆ 13 ಜನರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT