ದೇಶ

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು: ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಕಿಡಿ

Manjula VN

ಲಖನೌ: ರಾಮದ್ರೋಹಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದದ್ದು ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿ ಉತ್ತರಪ್ರದೇಶದ ಅಭಿವೃದ್ಧಿಗೆ ಅಡ್ಡಿಪಡಿಸಿ ರಾಜ್ಯವನ್ನು “ಗಲಭೆಗಳ ಬೆಂಕಿಯಲ್ಲಿ ನೂಕಿದರು” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿರೋಧ ಪಕ್ಷಗಳ ವಿರುದ್ಧ ಭಾನುವಾರ ತೀವ್ರವಾಗಿ ಕಿಡಿ ಕಾರಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಗವಾನ್ ರಾಮನ ಹಿತೈಷಿಗಳಲ್ಲದವರು ಎಂದಿಗೂ ನಿಮ್ಮ ಹಿತೈಷಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ರಾಮದ್ರೋಹಿಗಳಿಂದ ಅಂತರವನ್ನು ಕಾಯ್ದುಕೊಳ್ಳುವುದು ನಿಮ್ಮ ವರ್ತಮಾನಕ್ಕೆ ಮತ್ತು ನಿಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ಉತ್ತಮ ಎಂದು ಹೇಳಿದ್ದಾರೆ.

”ಉತ್ತರ ಪ್ರದೇಶದಲ್ಲಿ ಹಿಂದಿನ ಸರಕಾರಗಳ ಅವಧಿಯಲ್ಲಿ, ಹಿಂದೂ ಹಬ್ಬಗಳಿಗೆ ಮುನ್ನ ಗಲಭೆಗಳು ನಡೆಯುತ್ತಿತ್ತು, ಜನಸಾಮಾನ್ಯರು ಹಬ್ಬಗಳನ್ನು ಆಚರಿಸಲು ಸಾಧ್ಯವಾಗುತ್ತಿರಲಿಲ್ಲ, ಕರ್ಫ್ಯೂ ನೆರಳಿನಲ್ಲಿ ಭಯದಿಂದ ಬದುಕುತ್ತಿದ್ದರು .ನಮ್ಮ ಸರ್ಕಾರದ ಅವಧಿಯಲ್ಲಿ ಇದೆಲ್ಲವೂ ನಿಂತುಹೋಗಿದೆ” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್, ಎಸ್'ಪಿ ಮತ್ತು ಬಿಎಸ್'ಪಿ ಪಕ್ಷಗಳು ರಾಮ ಸೇತುವನ್ನು ಹಾನಿ ಮಾಡಲು ಪ್ರಯತ್ನಿಸಿದ್ದರು, ಆದರೆ, ಬಿಜೆಪಿ ಅದನ್ನು ರಕ್ಷಣೆ ಮಾಡಿತ್ತು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಚನೆಯಾದಾಗ ಅದಕ್ಕೆ ಬೆಂಬಲ ನೀಡಲು ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಎಸ್‌ಪಿ ಯಾರನ್ನೂ ಕೇಳದೆಯೇ ಬೆಂಬಲ ನೀಡಿತ್ತು. ಕಾಂಗ್ರೆಸ್‌ನ ಹೆಗಲ ಮೇಲೆ ಬಂದೂಕು ಇಟ್ಟು ಹಿಂದುಗಳ ನಂಬಿಕೆಗೆ ಧಕ್ಕೆ ತರುವುದು ಅದರ ಉದ್ದೇಶವಾಗಿತ್ತು. ಇವರು ನಂಬಿಕೆಗಷ್ಟೇ ಹಾನಿ ಮಾಡುವುದಲ್ಲದೆ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದರು. ಅಭಿವೃದ್ಧಿಗೂ ಹಾನಿ ಮಾಡಿದ್ದಾರೆ ಮತ್ತು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದ್ದಾರೆಂದು ಆರೋಪಿಸಿದ್ದಾರೆ.

ಕೆಲವರು ಕಾಶ್ಮೀರದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆಯ ತಾಯಿಯಾದ 370 ನೇ ವಿಧಿಯನ್ನು ರದ್ದುಗೊಳಿಸಿತು. ಇನ್ನೂ ಕೆಲವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿ ರಾಮಭಕ್ತರ ಮೇಲೆ ಗುಂಡು ಹಾರಿಸಿದರು, ಇಂದು ಬಿಜೆಪಿ ಸರ್ಕಾರಗಳು ಅದರ ನಿರ್ಮಾಣವನ್ನು ಪ್ರಾರಂಭಿಸಿವೆ ಮತ್ತು ಅದು ಭರದಿಂದ ಸಾಗುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಹಿಂದಿನ ಸರ್ಕಾರಗಳನ್ನು ವಿಶೇಷವಾಗಿ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರವನ್ನು ಟೀಕಿಸಿದ ಆದಿತ್ಯನಾಥ್ ಅವರು, ಆ ಪಕ್ಷದ ನಾಯಕರು ತಮ್ಮ ಕುಟುಂಬದ ಕಲ್ಯಾಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದರು  ಎಂದು ಆರೋಪಿಸಿದ್ದಾರೆ.

2012 ರಿಂದ 2017 ರವರೆಗೆ ಒಂದು ಕುಟುಂಬವು ರಾಜ್ಯವನ್ನು ಲೂಟಿ ಮಾಡುವುದರಲ್ಲಿ ಭಾಗಿಯಾಗಿತ್ತು. ಆ ಸರ್ಕಾರವು ಮಹಾಭಾರತದ 'ಕಲಿಯುಗದ ಅವತಾರ'ವಾಗಿತ್ತು. ಪ್ರತಿ ಜಿಲ್ಲೆಯಲ್ಲಿ ಗಲಭೆಗಳು ನಡೆದು ಹಿಂದುಗಳು ಕಿರುಕುಳಕ್ಕೊಳಗಾಗಿದ್ದರು ಎಂದು ಹೇಳಿದ್ದಾರೆ.

SCROLL FOR NEXT