ದೇಶ

ಭಾರತದ ವಿರುದ್ಧ ಪಾಕ್ ಜಯ; ಸಂಭ್ರಮಾಚರಣೆ ಮಾಡಿದ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಜಾರಿ

Srinivas Rao BV

ಶ್ರೀನಗರ: ಟಿ20 ವಿಶ್ವಕಪ್ ಸರಣಿಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಯುಎಪಿಎ ಯನ್ನು ಜಾರಿಗೊಳಿಸಲಾಗಿದೆ.

ಎರಡು ಪ್ರಕರಣಗಳು ಶ್ರೀನಗರದಲ್ಲಿ ಯುಎಪಿಎ ಅಡಿ ದಾಖಲಾಗಿದ್ದು, ಕರಣ್ ನಗರ ಹಾಗೂ ಎಸ್ ಕೆಐಎಂಎಸ್ ಸೌರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.

ಕಣಿವೆಯಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ. ಭಾರತ-ಪಾಕಿಸ್ತಾನ ವಿರುದ್ಧದ ಪಂದ್ಯ ದುಬೈ ನಲ್ಲಿ ಭಾನುವಾರ ನಡೆದಿತ್ತು.

ಪಾಕಿಸ್ತಾನ ಗೆಲ್ಲುತ್ತಿದ್ದಂತೆಯೇ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಲಾಗಿತ್ತು.

ಜಮ್ಮು-ಕಾಶ್ಮೀರ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾಗಿರುವ ಯುಎಪಿಎ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ವಾಪಸ್ ಪಡೆಯುವಂತೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾಗೆ ಆಗ್ರಹಿಸಿದೆ.

ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಈ ಬಗ್ಗೆ ಮಾತನಾಡಿದ್ದು, ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಜಾರಿಗೊಳಿಸುವುದು ಅತ್ಯಂತ ಕಠಿಣ ಶಿಕ್ಷೆಯಾಗಿದ್ದು, ಅವರ ಭವಿಷ್ಯಕ್ಕೇ ಮುಳುವಾಗಲಿದೆ. ಇದರಿಂದ ಅವರನ್ನು ಸಮಾಜ ದೂರವಿಡಲಿದೆ, ಹಾಗೆಂದು ವಿದ್ಯಾರ್ಥಿಗಳ ನಡೆಯನ್ನು ಸಮರ್ಥಿಸುತ್ತಿಲ್ಲ. ಆದರೆ ಅವರ ವಿರುದ್ಧದ ಈ ಕ್ರಮ ಅವರ ಭವಿಷ್ಯವನ್ನೇ ಹಾಳುಮಾಡಲಿದೆ" ಎಂದು ಹೇಳಿದ್ದಾರೆ.
 

SCROLL FOR NEXT