ದೇಶ

ಬಿಹಾರದ ಮಹಾಮೈತ್ರಿಗೆ ಸಂಕಷ್ಟ: ಲಾಲು ಪ್ರಸಾದ್ ಯಾದವ್ ಜತೆ ಸೋನಿಯಾ ಗಾಂಧಿ ಮಾತುಕತೆ

Lingaraj Badiger

ನವದೆಹಲಿ: ಬಿಹಾರದಲ್ಲಿನ ಪ್ರತಿಪಕ್ಷಗಳ ಮಹಾಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದರೆ ಉಭಯ ನಾಯಕರ ಚರ್ಚೆಯ ವಿವರಗಳು ಇನ್ನೂ ತಿಳಿದಿಲ್ಲ. 

ಅಕ್ಟೋಬರ್ 30 ರಂದು ಬಿಹಾರದ ಕುಶೇಶ್ವರ್ ಆಸ್ಥಾನ(ಎಸ್‌ಸಿ) ಮತ್ತು ತಾರಾಪುರ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಮುರಿದುಕೊಂಡ ನಂತರ ಈ ದೂರವಾಣಿ ಸಂಭಾಷಣೆ ನಡೆದಿದೆ.

ಈ ಹಿಂದೆ ಬಿಹಾರದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿರುವ ಲಾಲು ಪ್ರಸಾದ್ ಯಾದವ್, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಆರ್‌ಜೆಡಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

ಆದಾಗ್ಯೂ, ಮಂಗಳವಾರ, ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಬಿಜೆಪಿಗೆ 'ಪರ್ಯಾಯ ಶಕ್ತಿ'ಯಾಗುವಂತೆ ಕಾಂಗ್ರೆಸ್‌ಗೆ ಕರೆ ನೀಡಿದ ಆರ್‌ಜೆಡಿ ಮುಖ್ಯಸ್ಥರು, ತಮ್ಮ ಪಕ್ಷ ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಲಾಲು ಜತೆ ಮಾತುಕತೆ ನಡೆಸಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ.

2020 ರ ಬಿಹಾರ ವಿಧಾಸಭೆ ಚುನಾವಣೆಯನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ಜಂಟಿಯಾಗಿ ಎದುರಿಸಿದ್ದವು. ಆದರೆ ಆರ್ ಜೆಡಿ- ಕಾಂಗ್ರೆಸ್ ಮೈತ್ರಿ ಬಹುಮತ ಪಡೆಯಲು 10 ಸ್ಥಾನಗಳ ಕೊರತೆಯಾಗಿತ್ತು.

SCROLL FOR NEXT