ದೇಶ

ಸಮೀರ್ ವಾಂಖೆಡೆ ಸ್ಥೈರ್ಯಗೆಡಿಸುವ ಪ್ರಯತ್ನ: ಎನ್ ಸಿಬಿ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆಯಲು ಕೋರಿ ಪಿಐಎಲ್

Sumana Upadhyaya

ಮುಂಬೈ: ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಯಾಗಿರುವ ಡ್ರಗ್ ಕೇಸಿನ ವಿಚಾರದಲ್ಲಿ ಎನ್ ಸಿಬಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಎನ್ ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ತಡೆಯೊಡ್ಡಬೇಕು ಎಂದು ಮುಂಬೈ ನಿವಾಸಿಯೊಬ್ಬರು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.

ಮೌಲ್ವಿ ಹಾಗೂ ಡ್ರಗ್ ದಾಸರ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕೌಸರ್ ಆಲಿ ಎಂಬುವವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆರ್ಯನ್ ಖಾನ್ ಕೇಸಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ತನಿಖಾ ಸಂಸ್ಥೆಗಳ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಅಥವಾ ಎನ್ ಸಿಬಿ ವಿರುದ್ಧ ಕೂಡ ಹೇಳಿಕೆ ನೀಡದಂತೆ ಮಲಿಕ್ ಅವರಿಗೆ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಇದರಿಂದ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದಂತೆ ಆಗುವುದಲ್ಲದೆ ನಾಗರಿಕರಲ್ಲಿ ಡ್ರಗ್ ಬಳಕೆಗೆ ಪ್ರಚೋದನೆ ನೀಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

ನವಾಬ್ ಮಲಿಕ್ ಅವರ ಇತ್ತೀಚಿನ ಹೇಳಿಕೆಗಳು, ಟ್ವೀಟ್ ಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು, ಎನ್ ಸಿಬಿ ಮತ್ತು ಸಮೀರ್ ವಾಂಖೆಡೆಯವರ ವಿರುದ್ಧ ಅವರನ್ನು ಸ್ಥೈರ್ಯಗೆಡಿಸಲು ಈ ರೀತಿ ಹೇಳಿಕೆ  ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಮೀರ್ ವಾಂಖೆಡೆಯವರ ನೇತೃತ್ವದಲ್ಲಿ ಎನ್ ಸಿಬಿ ಅತ್ಯಂತ ಪರಿಣಾಮಕಾರಿ ಸಂಸ್ಥೆ ಎಂದು ಹೆಸರು ಪಡೆದಿದೆ. ಹೀಗಿರುವಾಗ ಅದರ ಬಗ್ಗೆ ಜನರಿಗೆ ನಂಬಿಕೆ ಹೋಗುವಂತೆ, ಸಂಶಯ ಹುಟ್ಟುವಂತೆ ಮಾಡಬಾರದು ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎಂದು ವಿಚಾರಣೆ ನಡೆಸಲಿದೆ ಎಂದು ಕಾದುನೋಡಬೇಕಿದೆ.

SCROLL FOR NEXT