ದೇಶ

ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್​ ಖಾನ್​ಗೆ ಇಂದೂ ಸಿಗದ ಜಾಮೀನು, ವಿಚಾರಣೆ ನಾಳೆಗೆ ಮುಂದೂಡಿಕೆ

Lingaraj Badiger

ಮುಂಬೈ: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ಬುಧವಾರ ಬಾಂಬೆ ಹೈಕೋರ್ಟ್​ನಲ್ಲಿ ನಡೆದಿದ್ದು, ದೀರ್ಘ ವಿಚಾರಣೆ ಬಳಿಕ ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಆರ್ಯನ್​ ಖಾನ್​ ಮತ್ತೊಂದು ದಿನ ಜೈಲಿನಲ್ಲೇ ಇರಬೇಕಾಗಿದೆ.

ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. ಹಾಗಾಗಿ ಅವನನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ನಿಲಯಕ್ಕೆ ಕಳುಹಿಸಬೇಕು ಎಂದು ವಾದ ಮಾಡಿದರು. ಅಲ್ಲದೇ ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ ಎಂದು ಮುಕುಲ್‌ ರೋಹ್ಟಗಿ ವಾದಿಸಿದರು.

ಆರೋಪಿಗಳ ಪರವಾಗಿ ಮುಕುಲ್ ರೋಹಟಗಿ, ಅಮಿತ್ ದೇಸಾಯಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಮಾಡಿದ ವಾದಗಳಿಗೆ ಗುರುವಾರ ಉತ್ತರಿಸುವುದಾಗಿ ಎನ್‌ಸಿಬಿ ಪರವಾಗಿ ಹಾಜರಾದ ಎಎಸ್‌ಜಿ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. "ನಾನು ನನ್ನ ವಾದಗಳನ್ನು ಒಂದು ಗಂಟೆಯೊಳಗೆ ಮುಗಿಸಲು ಪ್ರಯತ್ನಿಸುತ್ತೇನೆ" ಎಂದು ಎಎಸ್‌ಜಿ ಸಿಂಗ್ ಹೇಳಿದರು. ಹೀಗಾಗಿ ಗುರುವಾರ ಮಧ್ಯಾಹ್ನ 2.30ರ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಮುಂಬೈನ ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​​ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 23 ವರ್ಷದ ಆರ್ಯನ್​​ ಖಾನ್​​ನನ್ನು ಮಾರುವೇಷದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಅಕ್ಟೋಬರ್ 3 ರಂದು ಬಂಧಿಸಿದ್ದರು. ಆರ್ಯನ್​ ಖಾನ್​​ ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

SCROLL FOR NEXT