ದೇಶ

ಕೋವಿಡ್-19: ದೇಶಾದ್ಯಂತ ಕಂಟೈನ್ ಮೆಂಟ್ ಕ್ರಮಗಳನ್ನು ನವೆಂಬರ್ 30ರ ವರೆಗೆ ವಿಸ್ತರಿಸಿದ ಕೇಂದ್ರ

Lingaraj Badiger

ನವದೆಹಲಿ: ಕೆಲವು ರಾಜ್ಯಗಳಲ್ಲಿ ವೈರಸ್‌ನ ಸ್ಥಳೀಯ ಹರಡುವಿಕೆ ಕಂಡುಬಂದಿರುವುದರಿಂದ ಮತ್ತು ದೇಶದಲ್ಲಿ ಈ ರೋಗವು ಸಾರ್ವಜನಿಕ ಆರೋಗ್ಯದ ಸವಾಲಾಗಿ ಮುಂದುವರಿದಿರುವುದರಿಂದ ಕೇಂದ್ರ ಸರ್ಕಾರ ಗುರುವಾರ ದೇಶಾದ್ಯಂತ ಕೋವಿಡ್-19 ಕಂಟೈನ್ ಮೆಂಟ್ ಕ್ರಮಗಳನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಕೊರೋನಾ ಹರಡುವುದನ್ನು ತಡೆಯಲು ಅಸ್ತಿತ್ವದಲ್ಲಿರುವ ಪ್ರೋಟೋಕಾಲ್‌ಗಳು ನವೆಂಬರ್ 30 ರವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದ ಭಲ್ಲಾ ಅವರು, ವಿಶೇಷವಾಗಿ ಹಬ್ಬದ ಸಮಯದಲ್ಲಿ ಎಚ್ಚರಿಕೆಯ, ಸುರಕ್ಷಿತ ಮತ್ತು ಕೋವಿಡ್ ಮಾರ್ಗಸೂಚಿಗಳೊಂದಿಗೆ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದರು.

ದೇಶದಲ್ಲಿ ದೈನಂದಿನ ಪ್ರಕರಣಗಳು ಮತ್ತು ಒಟ್ಟಾರೆ ರೋಗಿಗಳ ಸಂಖ್ಯೆ ಸ್ಥಿರವಾಗಿ ಕ್ಷೀಣಿಸುತ್ತಿದೆ. ಆದರೆ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ವೈರಸ್ ಹರಡುತ್ತಿದೆ ಮತ್ತು ಕೋವಿಡ್-19 ದೇಶದಲ್ಲಿ ಸಾರ್ವಜನಿಕ ಆರೋಗ್ಯ ಸವಾಲಾಗಿ ಮುಂದುವರೆದಿದೆ ಎಂದು ಭಲ್ಲಾ ಹೇಳಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ, ಆಸ್ಪತ್ರೆ, ಐಸಿಯು ಬೆಡ್‌ಗಳ ಆಕ್ಯುಪೆನ್ಸಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಸೂಚಿಸಿದ್ದಾರೆ.

SCROLL FOR NEXT