ದೇಶ

ವಾಯು ಮಾಲಿನ್ಯದಿಂದ ಉತ್ತರ ಭಾರತದ ಜನರ ಆಯುಷ್ಯ 9 ವರ್ಷ ಕಡಿತ ಸಾಧ್ಯತೆ; ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ 11.5 ವರ್ಷ!

Srinivas Rao BV

ನವದೆಹಲಿ: ಭಾರತದಲ್ಲಿರುವ ವಾಯುಮಾಲಿನ್ಯದಿಂದ ಉತ್ತರ ಭಾರತದ ಪ್ರಜೆಗಳ ಜೀವಿತಾವಧಿಯಲ್ಲಿ 9 ವರ್ಷ ಕಡಿತಗೊಳ್ಳುತ್ತಿದೆ ಎಂದು ಯೂನಿವರ್ಸಿಟಿ ಆಫ್ ಚಿಕಾಗೋ ಪ್ರಕಟಿಸಿರುವ ವರದಿ ಹೇಳಿದೆ.

ಭಾರತ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಈ ದೇಶದ ಶೇ.40 ರಷ್ಟು ಜನಸಂಖ್ಯೆ ವಾಸಿಸುತ್ತಿರುವುದು ಗಂಗಾ ನದಿ ಹರಿಯುವ ಪ್ರದೇಶಗಳಲ್ಲಿ. ಈ ಪ್ರದೇಶಗಳಲ್ಲಿ ಮಾಲಿನ್ಯ ನಿರಂತರವಾಗಿ ಏರಿಕೆಯಾಗುತ್ತಿದ್ದು 2019 ರಲ್ಲಿದ್ದಷ್ಟೇ ಮಾಲಿನ್ಯ ಪ್ರಮಾಣಗಳು ಈಗಲೂ ಇದ್ದಲ್ಲಿ ಅದರ ಪರಿಣಾಮವಾಗಿ ಉತ್ತರ ಭಾರತದ ಮಂದಿ ತಮ್ಮ ಆಯುಷ್ಯದಲ್ಲಿ 9 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿನ ಅಂಶಗಳು ಎಚ್ಚರಿಸಿವೆ.

ಇನ್ನು ಮಾಲಿನ್ಯದಿಂದ ಜೀವಿತದ ಅವಧಿಯನ್ನು ಕಡಿಮೆಗೊಳಿಸಿಕೊಳ್ಳುತ್ತಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶವೂ ಮುಂದಿದ್ದು ಹೆಚ್ಚುವರಿಯಾಗಿ 2.5-2.9 ವರ್ಷಗಳಷ್ಟು ಅಂದರೆ ಒಟ್ಟು 11.5 ವರ್ಷ ಆಯುಷ್ಯ ಕಡಿತಗೊಳ್ಳುತ್ತಿದೆ ಎಂದು ವರದಿ ಹೇಳಿದೆ.

ಶುದ್ಧ ಗಾಳಿ ಸೇವಿಸಿದರೆ ಮನುಷ್ಯ ಗರಿಷ್ಠ ಎಷ್ಟು ವರ್ಷ ಬದುಕಲು ಸಾಧ್ಯ ಎಂಬ ಬಗ್ಗೆ ಈ ವಿವಿ ಏರ್ ಕ್ವಾಲಿಟಿ ಹಾಗೂ ಲೈಫ್ ಇಂಡೆಕ್ಸ್ ಅಧ್ಯಯನ ನಡೆಸಿದ್ದು ವರದಿ ಪ್ರಕಟಿಸಿದೆ.

ಉತ್ತರ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮಾಲಿನ್ಯವಿದೆ ಎಂದು ವರದಿ ಎಚ್ಚರಿಸಿದೆ.

2019 ರಲ್ಲಿ ಭಾರತದಲ್ಲಿನ ಮಾಲಿನ್ಯ ಕಣಗಳ ಸಾಂದ್ರತೆ ಕ್ಯುಬಿಕ್ ಮೀಟರ್ ಗೆ 70.3 ಮೈಕ್ರೋಗ್ರಾಮ್ (µg/m3) ಇತ್ತು. ಇದು ವಿಶ್ವದಲ್ಲೇ ಅತಿ ಹೆಚ್ಚು ಹಾಗೂ ಡಬ್ಲ್ಯುಹೆಚ್ ಒ ನಿಗದಿಪಡಿಸಿರುವ 10 µg/m3 ಗಿಂತ 7 ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.

ಕೇವಲ ಉತ್ತರ ಭಾರತವಷ್ಟೇ ಅಲ್ಲದೇ ಈ ಮಾಲಿನ್ಯ ಪ್ರಮಾಣಗಳು ಭಾರತದಾದ್ಯಂತ ಹೆಚ್ಚುತ್ತಿದ್ದು, ದಶಕಗಳ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಮಾಲಿನ್ಯ ಕಣಗಳು ಇಂಡೋ-ಗಂಗಾ ಬಯಲು ಪ್ರದೇಶಗಳು ಮಾತ್ರ ಸೀಮಿತವಾಗಿಲ್ಲ ಎನ್ನುತ್ತದೆ ವರದಿ 

ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನಗಳಿಗೆ ಎಕ್ಯುಎಲ್ಐ ಡೇಟಾ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಡಬ್ಲ್ಯುಹೆಚ್ಒ ನಿಗದಿಪಡಿಸಿರುವ ಮಾನದಂಡಗಳಿಗೆ ಮಾಲಿನ್ಯ ಪ್ರಮಾಣವನ್ನು ಇಳಿಕೆ ಮಾಡಿಕೊಂಡಲ್ಲಿ ಈ ಪ್ರದೇಶಗಳಲ್ಲಿನ ಜನತೆ ಸರಾಸರಿ 5.6 ವರ್ಷಗಳು ಹೆಚ್ಚು ಬದುಕಲಿದ್ದಾರೆ ಎಂದು ವರದಿ ಹೇಳಿದೆ.

SCROLL FOR NEXT