ದೇಶ

ಚೀನಾ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ಆರ್ ಟಿ- ಪಿಸಿಆರ್ ಪರೀಕ್ಷೆ ಕಡ್ಡಾಯ

Nagaraja AB

ನವದೆಹಲಿ: ಕೋವಿಡ್-19 ಹೊಸ ರೂಪಾಂತರ ಭೀತಿಯ ನಡುವೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಚೀನಾ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಜಾಗತಿಕವಾಗಿ ಸಾರ್ಸ್ ಕೋವ್ 2 ಹೊಸ ರೂಪಾಂತರ ವರದಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂದಿಳಿದ ನಂತರ ಏಳು ರಾಷ್ಟ್ರಗಳ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ ಎಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೊಟ್ಸ್ ವಾನ, ಚೀನಾ, ಮಾರಿಷಿಯಸ್, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ಈ ಏಳು ರಾಷ್ಟ್ರಗಳಾಗಿವೆ.

ಈ ಹಿಂದೆ ಫೆಬ್ರವರಿಯಲ್ಲಿ ಹೊರಡಿಸಲಾದ ಮಾರ್ಗಸೂಚಿ ಪ್ರಕಾರ, ಯುನೈಟೆಡ್ ಕಿಂಗ್ ಡಮ್, ಯುರೋಪ್ ಮತ್ತು ಪ್ರಯಾಣಿಕರು ಮಾತ್ರ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಬೇಕಾಗಿತ್ತು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗ ಸದಸ್ಯ (ಆರೋಗ್ಯ) ವಿಕೆ ಪೌಲ್, ರೂಪಾಂತರ ನಿರ್ಗಮಿಸಿದ್ದರೂ ಪರೀಕ್ಷೆ, ಪತ್ತೆ, ಲಸಿಕೆ, ಕ್ಲಿನಿಕಲ್ ಸಿದ್ಧತೆ ಹಾಗೂ ಕೋವಿಡ್ ನಿಯಮಗಳನ್ನು ಬಲವಾಗಿ ಬಳಸಲಾಗುವುದು ಎಂದರು. ಕೊಲಂಬಿಯಾದಲ್ಲಿ ಕಂಡುಬಂದಿರುವ ರೂಪಾಂತರದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಐಸಿಎಂಆರ್ ನಿರ್ದೇಶಕ ಜನರಲ್ ಬಲರಾಮ್ ಭಾರ್ಗವ ಹೇಳಿದರು.

SCROLL FOR NEXT