ದೇಶ

ಪಶ್ಚಿಮ ಬಂಗಾಳ ಉಪಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಭವಾನಿಪುರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆ

Nagaraja AB

ಕೊಲ್ಕತ್ತಾ:  ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಅಭ್ಯರ್ಥಿಯನ್ನಾಗಿ ತೃಣಮೂಲ ಕಾಂಗ್ರೆಸ್ ಭಾನುವಾರ ಅಧಿಕೃತವಾಗಿ ಘೋಷಿಸಿದೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಚುನಾವಣಾ ಆಯೋಗ ಶನಿವಾರವಷ್ಟೇ ಉಪ ಚುನಾವಣೆಯನ್ನು ಘೋಷಿಸಿತ್ತು. ದಕ್ಷಿಣ ಕೋಲ್ಕತ್ತಾದ ಭವಾನಿಪುರದಲ್ಲಿ ಟಿಎಂಸಿ ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. 

ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಭವಾನಿಪುರದಲ್ಲಿ ಗೆಲುವು ಅಗತ್ಯವಾಗಿದೆ.  ಬಿಜೆಪಿ, ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಉಪ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.

ಭವಾನಿಪುರದ ಜೊತೆಗೆ ಮುರ್ಷಿದಾಬಾದ್ ನ ಜಂಗೀಪುರ ಹಾಗೂ  ಸಮ್ ಸೇರ್ ಗುಂಜ್ ಕ್ಷೇತ್ರಕ್ಕೂ ಸೆಪ್ಟೆಂಬರ್ 30 ರಂದು ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.  ಜಂಗೀಪುರಕ್ಕೆ ಜಾಕಿರ್ ಹುಸೇನ್ ಮತ್ತು ಸಮ್ ಸೇರ್ ಗುಂಜ್ ಕ್ಷೇತ್ರಕ್ಕೆ ಅಮಿರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಟಿಎಂಸಿ ಪಕ್ಷ ತಿಳಿಸಿದೆ.

ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಭವಾನಿಪುರದ ಟಿಎಂಸಿ ಶಾಸಕ ಶೋಭನ್ ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು. 2011 ರಿಂದ ಎರಡು ಬಾರಿ ಭವಾನಿಪುರ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಗೆದಿದ್ದರು.

SCROLL FOR NEXT