ದೇಶ

ಗಾಂಧೀಜಿ ಎಂದಿಗೂ ಟೊಪ್ಪಿ ಧರಿಸುತ್ತಲೇ ಇರಲಿಲ್ಲ, ಅವರ ಹೆಸರಲ್ಲಿ ನೆಹರೂ ಧರಿಸುತ್ತಿದ್ದರು: ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

Sumana Upadhyaya

ಅಹ್ಮದಾಬಾದ್: ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ, ಅವರ ಹೆಸರಿನಲ್ಲಿ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಧರಿಸಿ ಅದನ್ನು ಮಹಾತ್ಮಾ ಗಾಂಧಿ ಟೋಪಿ ಎಂದು ಕರೆದರು ಎಂದು ಗುಜರಾತ್ ನ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ನೀಡಿದ್ದ ಹೇಳಿಕೆಯನ್ನು ಅಲ್ಲಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಸಮರ್ಥಿಸಿಕೊಂಡಿದ್ದಾರೆ.

ಗಾಂಧಿ ಟೋಪಿ ಎಂದು ಹೆಸರಾಗಿದ್ದರೂ ಯಾರೂ ಕೂಡ ಗಾಂಧಿಯವರು ಟೊಪ್ಪಿ ಧರಿಸಿದ್ದನ್ನು ನೋಡಿದ್ದಿಲ್ಲ ಎಂದು ಹೇಳಿದ್ದಾರೆ.
ಗಾಂಧೀಜಿಯವರು ಆ ಗಾಂಧಿ ಟೊಪ್ಪಿ ಧರಿಸಿರುವುದನ್ನು ಕಾಣುವ ಫೋಟೋವನ್ನು ಇದುವರೆಗೆ ಯಾರೂ ಕಂಡಿಲ್ಲ. ನಾನು ಕೂಡ ಅಂತಹ ಫೋಟೋವನ್ನು ನೋಡಿಲ್ಲ. ಹೀಗಾಗಿ, ರತ್ನಾಕರ್ ಅವರು ಹೇಳಿದ್ದು ನಿಜ. ಟೊಪ್ಪಿಯನ್ನು 'ಗಾಂಧಿ ಟೋಪಿ' ಎಂದು ಕರೆಯಲಾಗಿದ್ದರೂ, ಗಾಂಧೀಜಿ ಗಾಂಧಿ ಟೋಪಿ ಧರಿಸಿರುವುದನ್ನು ಬಹುಶಃ ಯಾರೂ ನೋಡಿಲ್ಲ ಎಂದು ನಿನ್ನೆ ಗುಜರಾತ್ ನ ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇತ್ತೀಚೆಗೆ ಗುಜರಾತ್ ಬಿಜೆಪಿಯ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ರತ್ನಾಕರ್ ಅವರು ಮೊನ್ನೆ ಭಾನುವಾರ ಟ್ವೀಟ್ ಮಾಡಿ, ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಧರಿಸಿದಾಗ "ಗಾಂಧಿ ಟೋಪಿ" ಎಂದು ಕರೆದರು ಎಂದು ಬರೆದುಕೊಂಡಿದ್ದರು.

ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ಬ್ರಿಟಿಷರ ಪರವಾಗಿ ನಿಂತ ಜನರು ಈಗ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಮೊದಲ ಪ್ರಧಾನಿಯತ್ತ ಬೆರಳು ತೋರಿಸುತ್ತಿದ್ದಾರೆ. ಬ್ರಿಟಿಷ್ ಟೋಪಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಜನರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಾಂಧಿ-ಸರ್ದಾರ್‌ ಗುಜರಾತ್‌ಗೆ ಬಂದ ನಂತರ ಭಾರತದ ಮೊದಲ ಪ್ರಧಾನ ಮಂತ್ರಿಗಳ ಬಗ್ಗೆ ಇಂತಹ ಟೀಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದೆ.

ಕೆಲವರು ಹತಾಶರಾಗಿ ಇತಿಹಾಸವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನಿಶಾ ದೋಷಿ ಟೀಕಿಸಿದ್ದಾರೆ.

SCROLL FOR NEXT