ದೇಶ

ಐಎಎಫ್‌ಗಾಗಿ ಏರ್‌ಬಸ್‌ನಿಂದ 56 ಸಾರಿಗೆ ವಿಮಾನ ಖರೀದಿಗೆ ಕೇಂದ್ರ ಸಂಪುಟ ಸಮಿತಿ ಅಸ್ತು

Lingaraj Badiger

ನವದೆಹಲಿ: ಪ್ರಮುಖ ನಿರ್ಧಾರವೊಂದರಲ್ಲಿ, ಭದ್ರತೆ ಕುರಿತ ಕೇಂದ್ರ ಸಂಪುಟ ಸಮಿತಿಯು ಭಾರತೀಯ ವಾಯುಪಡೆ (ಐಎಎಫ್)ಗೆ ವಯಸ್ಸಾದ ಅವ್ರೊ ಫ್ಲೀಟ್ ಅನ್ನು ಬದಲಿಸಲು 56 ಅವಳಿ-ಟರ್ಬೊಪ್ರೊಪ್ ಸಿ-295 ವಿಮಾನಗಳನ್ನು ಖರೀದಿಸಲು ಬುಧವಾರ ಅನುಮೋದನೆ ನೀಡಿದೆ.

ಹದಿನಾರು ವಿಮಾನಗಳನ್ನು ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನಿಂದ ಫ್ಲೈಅವೇ ಸ್ಥಿತಿಯಲ್ಲಿ ಖರೀದಿಸಲಾಗುವುದು ಮತ್ತು 40 ವಿಮಾನಗಳನ್ನು ಟಾಟಾ ಸಹಯೋಗದೊಂದಿಗೆ ಏರ್‌ಬಸ್ ಭಾರತದಲ್ಲಿ ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

"ಇಂದು, ಭದ್ರತೆ ಕುರಿತ ಸಂಪುಟ ಸಮಿತಿಯು ಭಾರತೀಯ ವಾಯುಪಡೆಗಾಗಿ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ನಿಂದ 56 ಸಿ-295 ಸಾರಿಗೆ ವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಿದೆ" ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಸಿ-295 ವಿಮಾನವು 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಸಮಕಾಲೀನ ತಂತ್ರಜ್ಞಾನದೊಂದಿಗೆ ವಾಯುಪಡೆಯ ವಯಸ್ಸಾದ ಅವ್ರೊ ವಿಮಾನವನ್ನು ಬದಲಾಯಿಸುತ್ತಿದೆ ಎಂದು ಹೇಳಿದೆ.

"ಒಪ್ಪಂದಕ್ಕೆ ಸಹಿ ಹಾಕಿದ 48 ತಿಂಗಳಲ್ಲಿ ಹದಿನಾರು ವಿಮಾನಗಳನ್ನು ಸ್ಪೇನ್‌ನಿಂದ ಫ್ಲೈಅವೇ ಸ್ಥಿತಿಯಲ್ಲಿ ತಲುಪಿಸಲಾಗುತ್ತದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ 10 ವರ್ಷಗಳಲ್ಲಿ ನಲವತ್ತು ವಿಮಾನಗಳನ್ನು ಟಾಟಾ ಸಹಯೋಗದೊಂದಿಗೆ ಭಾರತದಲ್ಲಿ ತಯಾರಿಸುತ್ತದೆ" ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT