ದೇಶ

ಕರ್ನಾಲ್‌ ಘಟನೆ ತನಿಖೆಗೆ ಆದೇಶಿಸಿದ ಹರಿಯಾಣ ಸರ್ಕಾರ; ಪ್ರತಿಭಟನೆ ಕೈಬಿಟ್ಟ ರೈತರು

Manjula VN

ಚಂಡೀಗಢ: ಐಎಎಸ್ ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಮತ್ತು ರೈತರ ಮೇಲಿನ ಪೋಲಿಸ್ ಲಾಠಿ ಚಾರ್ಜ್ ಸೇರಿದಂತೆ ಕರ್ನಾಲ್ ಘಟನೆಯನ್ನು ಹರಿಯಾಣ ಸರ್ಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ.

ಕರ್ನಾಲ್ ಘಟನೆ ಕುರಿತು ಹೇಳಿಕೆ ನೀಡಿದ್ದ ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದರ್ ಸಿಂಗ್ ಅವರು, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆ ಕುರಿತು ತನಿಖೆ ನಡೆಸಲಾಗುತ್ತದೆ. ತಿಂಗಳೊಳಗಾಗಿ ತನಿಖೆ ಪೂರ್ಣಗೊಳ್ಳುತ್ತದೆ. ಅಲ್ಲಿಯವರೆಗೂ ಮಾಜಿ ಎಸ್'ಡಿಎಂ ಆಯುಷ್ ಸಿನ್ಹಾ ಅವರು ಕರ್ತವ್ಯದಿಂದ ದೂರ ಉಳಿಯಲಿದ್ದಾರೆಂದು ಹೇಳಿದ್ದರು. 

ಸರ್ಕಾರ ಘಟನೆ ಕುರಿತು ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ರೈತ ನಾಯಕ ಗುರ್ನಾಮ್ ಸಿಂಗ್ ಛಾಡುನಿಯವರು ಮಾತನಾಡಿ, ಕರ್ನಾಲ್ ಜಿಲ್ಲಾ ಮುಖ್ಯ ಕಚೇರಿ ಬಳಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. 

ಆಗಸ್ಟ್ 28ರಂದು ಕರ್ನಾಲ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ ಐಎಎಸ್‌ ಅಧಿಕಾರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಆರಂಭಿಸಿದ್ದರು. 

ಕರ್ನಾಲ್‌ನಲ್ಲಿ ಬಿಜೆಪಿ ಕಾರ್ಯಕ್ರಮದ ಸ್ಥಳಕ್ಕೆ ಮೆರವಣಿಗೆ ತೆರಳದಂತೆ ಪೊಲೀಸರು ರೈತರ ಮೇಲೆ ಬಲಪ್ರಯೋಗ ಮಾಡಿದಾಗ 10 ಜನರು ಗಾಯಗೊಂಡಿದ್ದರು. ಕಳೆದ ತಿಂಗಳು ರೈತರ ಪ್ರತಿಭಟನೆಯ ಸಮಯದಲ್ಲಿ ರೈತರು ಗಡಿ ದಾಟಿದರೆ ರೈತರ ತಲೆ ಒಡೆಯುವಂತೆ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಹೇಳಿಕೆ ನೀಡಿದ್ದರು.

SCROLL FOR NEXT