ದೇಶ

ಉತ್ತರ ಪ್ರದೇಶ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಸಂಜಯ್ ರಾವುತ್

Srinivas Rao BV

ಮುಂಬೈ: ಉತ್ತರ ಪ್ರದೇಶ, ಗೋವಾ ರಾಜ್ಯಗಳ ಚುನಾವಣೆ ಸನಿಹದಲ್ಲಿದ್ದು, ಈ ಚುನಾವಣೆಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಪಕ್ಷದ ಸಂಸದ ಸಂಜಯ್ ರಾವುತ್ ಮಾಹಿತಿ ನೀಡಿದ್ದಾರೆ.

"ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರ ಸಂಘಟನೆಗಳು ತಮ್ಮ ಪಕ್ಷವನ್ನು ಬೆಂಬಲಿಸಲು ಬಯಸುತ್ತಿದ್ದಾರೆ" ಎಂದು ರಾವುತ್ ಹೇಳಿರುವುದು ಅಚ್ಚರಿ ಮೂಡಿಸಿದೆ.

ಮುಂಬೈ ನಲ್ಲಿ ಸೆ.12 ರಂದು ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಉತ್ತರ ಪ್ರದೇಶದಲ್ಲಿ (403 ವಿಧಾನಸಭಾ ಕ್ಷೇತ್ರಗಳು) 80-100 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ. 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾದಲ್ಲಿ 20 ಕ್ಷೇತ್ರದಲ್ಲಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ರಾವುತ್ ಹೇಳಿದ್ದಾರೆ.

"ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರ ಸಂಘಟನೆಗಳು ಶಿವಸೇನೆಯನ್ನು ಬೆಂಬಲಿಸಲು ತಯಾರಾಗಿವೆ. ಅಲ್ಲಿ ಇನ್ನಿತರ ಸಣ್ಣ ಪಕ್ಷಗಳೊಂದಿಗೆ ನಾವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಗೋವಾದಲ್ಲಿ ಎಂವಿಎ ಸೂತ್ರವನ್ನು ಪಕ್ಷ ಪರಿಗಣಿಸುತ್ತಿದೆ". ಎಂದು ರಾವುತ್ ಮಾಹಿತಿ ನೀಡಿದ್ದಾರೆ.

"ಈ ಎರಡೂ ರಾಜ್ಯಗಳಲ್ಲಿ ಶಿವಸೇನೆಗೆ ಕಾರ್ಯಕರ್ತರಿದ್ದಾರೆ. ಯಶಸ್ಸು, ವೈಫಲ್ಯಗಳನ್ನು ಲೆಕ್ಕಿಸದೇ ಶಿವಸೆನೆ ಈ ರಾಜ್ಯಗಳಲ್ಲಿ ಚುನಾವಣೆ ಎದುರಿಸುತ್ತಿದೆ" ಎಂದು ರಾವುತ್ ಹೇಳಿದ್ದಾರೆ. 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ತನ್ನ ದೀರ್ಘಕಾಲಿನ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್, ಎನ್ ಸಿ ಪಿ ಜೊತೆ ಸೇರಿ ಮಹಾ ವಿಕಾಸ್ ಅಘಾಡಿ (ಎಂಬಿಎ) ಮೂಲಕ ಸರ್ಕಾರ ರಚಿಸಿತ್ತು.

ಇದೇ ವೇಳೆ ಗುಜರಾತ್ ಸಿಎಂ ರುಪಾನಿ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ "ಅದು ಬಿಜೆಪಿಯ ಆಂತರಿಕ ವಿಷಯ" ಎಂದಷ್ಟೇ ಹೇಳಿದ್ದಾರೆ.

SCROLL FOR NEXT