ದೇಶ

ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್‌ ಶಾ

Lingaraj Badiger

ನವದೆಹಲಿ: ಆತ್ಮ ನಿರ್ಭರ ಎಂದರೆ ದೇಶದಲ್ಲಿಯೇ ಉತ್ಪಾದನೆ ಮಾಡುವುದು ಮಾತ್ರವಲ್ಲ, ಭಾಷೆಯ ವಿಷಯದಲ್ಲೂ ನಾವು ಸ್ವಾವಲಂಭಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಂಗಳವಾರ ಕರೆ ನೀಡಿದ್ದಾರೆ.

ನವದೆಹಲಿ ವಿಜ್ಞಾನ ಭವನದಲ್ಲಿಂದು “ಹಿಂದಿ ದಿವಸ್‌ಸಮಾರಂಭ 2021”ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪ್ರಧಾನಿಗಳು ಅಂತರಾಷ್ಟೀಯ ಮಟ್ಟದಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಮುಜುಗರ ಪಡುವಂತಹ ದಿನಗಳು ಈಗಿಲ್ಲ. ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಜನರು ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹಂತ ಹಂತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಮಾತೃ ಬಾಷೆ ಹಾಗೂ ಅಧಿಕೃತ ಭಾಷೆಗಳ ಸಮನ್ವಯದಲ್ಲಿ ದೇಶದ ಅಭಿವೃದ್ದಿ ಅಡಗಿದೆ ಎಂದರು.

ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದ್ದು, ಸಾಂಸ್ಕತಿಕ ಪ್ರಜ್ಞೆ ಹಾಗೂ ರಾಷ್ಟ್ರೀಯ ಏಕತೆಯ ಮೂಲ ಆಧಾರವಾಗಿರುವ ಹಿಂದಿಯು ಪ್ರಾಚೀನ ನಾಗರೀಕತೆ ಹಾಗೂ ಆಧುನಿಕ ಪ್ರಗತಿಯ ನಡುವೆ ಸೇತುವೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಹಿಂದಿ ಹಾಗೂ ಎಲ್ಲ ಭಾರತೀಯ ಭಾಷೆಗಳ ಸಮಾನಂತರ ಅಭಿವೃದ್ದಿಗೆ ನಿರಂತರ ಬದ್ದವಾಗಿದ್ದೇವೆ ಎಂದು ಹೇಳಿದರು.

ಭಾರತ ಹಲವು ಭಾಷೆಗಳ ದೇಶವಾಗಿದೆ. ಪ್ರತಿಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಅಲ್ಲದೆ ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ನುಡಿದರು.

SCROLL FOR NEXT