ದೇಶ

'ದಲಾಲ್ ರಾಜ್' ಅಂತ್ಯಗೊಳಿಸುವಂತೆ ಅಸ್ಸಾಂ ಸಿಎಂ ಕರೆ ನೀಡಿದ 24 ಗಂಟೆಗಳಲ್ಲೇ 453 ಭೂ ದಲ್ಲಾಳಿಗಳ ಬಂಧನ!

Lingaraj Badiger

ಗುವಾಹಟಿ: 'ದಲಾಲ್ ರಾಜ್' ಅಂತ್ಯಗೊಳಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಕರೆ ನೀಡಿದ ನಂತರ 24 ಗಂಟೆಯಲ್ಲೇ ಅಸ್ಸಾಂ ಪೊಲೀಸರು ಬರೋಬ್ಬರಿ 453 ಭೂ ದಲ್ಲಾಳಿಗಳನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ 'ದಲಾಲ್ ರಾಜ್' ಅಂತ್ಯಗೊಳಿಸುವ ನಮ್ಮ ಸಂಘಟಿತ ಪ್ರತಿಜ್ಞೆಯ ಭಾಗವಾಗಿ ಇದುವರೆಗೆ 453 ಭೂ ದಲ್ಲಾಳಿಗಳನ್ನು ಬಂಧಿಸಲಾಗಿದೆ. ಕಂದಾಯ ಕಚೇರಿಗಳಲ್ಲಿ ಈ ಕುಖ್ಯಾತ ದಲ್ಲಾಳಿಗಳು ಜನಸಾಮಾನ್ಯರಿಗೆ ನೀಡುವ ಕಿರುಕುಳವನ್ನು ಕೊನೆಗೊಳಿಸಬೇಕು. ನೀಚ ಚಟುವಟಿಕೆಗಳ ವಿರುದ್ಧ ನಮ್ಮ ಹೋರಾಟ ಪಟ್ಟುಬಿಡದೆ ಮುಂದುವರಿಯುತ್ತದೆ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ.

ಮಂಗಳವಾರ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರಕ್ಕೆ ತೆರಳುವ ಮುನ್ನ, ಅಸ್ಸಾಂ ಜನರು ಮಧ್ಯವರ್ತಿಗಳಿಗೆ ಹಣ ನೀಡದಂತೆ ಸಿಎಂ ಶರ್ಮಾ ಅವರು ಮನವಿ ಮಾಡಿದರು.

ತಮ್ಮ ಕಚೇರಿಗಳಿಗೆ ಮಧ್ಯವರ್ತಿಗಳಿಗೆ ಯಾವುದೇ ಪ್ರವೇಶ ನೀಡಬಾರದೆಂದು ನಾನು ಮೇಲಿನಿಂದ ಕೆಳಗಿನವರೆಗೆ ರಾಜ್ಯ ಸರ್ಕಾರಿ ನೌಕರರಿಗೆ ವಿನಂತಿಸುತ್ತೇನೆ. ನಾವು ಮಧ್ಯವರ್ತಿಗಳ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಬಯಸುತ್ತೇವೆ. ಇದು ಮುಂದುವರಿದರೆ, ಅಸ್ಸಾಂ ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.

ಭೂ ಮಾರಾಟ, ಖರೀದಿ ಮತ್ತು ಹಿಡುವಳಿ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ದಲ್ಲಾಳಿಗಳನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ವಿಶೇಷ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅವರು ತಿಳಿಸಿದ್ದಾರೆ.

SCROLL FOR NEXT