ದೇಶ

ಮಹಾಂತ ನರೇಂದ್ರ ಗಿರಿ ಸಾವು ಪ್ರಕರಣ: ಪ್ರಯಾಗ್ ರಾಜ್ ತಲುಪಿದ ಸಿಬಿಐ ತಂಡ

Srinivas Rao BV

ಪ್ರಯಾಗ್ ರಾಜ್: ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥರಾದ ಮಹಾಂತ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವುದಕ್ಕೆ ಸಿಬಿಐ ತಂಡ ಪ್ರಯಾಗ್ ರಾಜ್ ಗೆ ತಲುಪಿದೆ.

5 ಸದಸ್ಯರನ್ನೊಳಗೊಂಡ ಸಿಬಿಐ ತಂಡ ಇದಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸೆ.22 ರಂದು ತಡರಾತ್ರಿ ಈ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

ಮಹಾಂತ ನರೇಂದ್ರ ಗಿರಿ ಅವರು ಪ್ರಯಾಗ್ ರಾಜ್ ನ ಭಾಗಂಬರಿ ಮಠದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸೆ.20 ರಂದು ಪತ್ತೆಯಾಗಿದ್ದರು. ಅವರ ಮೃತ ದೇಹ ಪತ್ತೆಯಾದ ಪ್ರದೇಶದಲ್ಲಿ 7 ಪುಟಗಳ ಪತ್ರ ದೊರೆತಿತ್ತು.

ಈ ಸಾವಿನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಕಾರಣ ತಿಳಿಯುವುದಕ್ಕೆ ರಾಜ್ಯ ಸರ್ಕಾರ 18 ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ ಐಟಿ)ಯನ್ನು ರಚಿಸಿತ್ತು

ಎಸ್ ಐಟಿ ಮೂಲಗಳ ಪ್ರಕಾರ ಮಹಾಂತ ನರೇಂದ್ರ ಗಿರಿ ಅವರ ಕರೆ ವಿವರಗಳು ಲಭ್ಯವಾಗಿದ್ದು, ಹರಿದ್ವಾರದಲ್ಲಿರುವ ಕೆಲವು ಪ್ರಾಪರ್ಟಿ ಡೀಲರ್ ಗಳಿಗೆ ಕರೆ ಮಾಡಿ, ಕರೆ ಸ್ವೀಕರಿಸಿದ್ದರು. ಹರಿದ್ವಾರದಲ್ಲಿನ ಭಾಗಂಬರಿ ಮಠ ಪರಿಗಣಿಸಲಾಗುತ್ತಿದ್ದ ಆಸ್ತಿಯಾಗಿತ್ತು ಎಂದು ತಿಳಿದುಬಂದಿದೆ.

ಎಸ್ ಐಟಿ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಪ್ರಾಪರ್ಟಿ ಡೀಲರ್ ಗಳೂ ಸೇರಿ 18 ಮಂದಿಯನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದೇ ವೇಳೆ ನರೇಂದ್ರ ಗಿರಿ ಅವರ ಸಾವಿನ ತಕ್ಷಣವೇ ತೆಗೆಯಲಾಗಿರುವ ವಿಡಿಯೋ ಕ್ಲಿಪ್ಪಿಂಗ್ ವೈರಲ್ ಆಗತೊಡಗಿದ್ದು, ಅವರ ಸಾವಿನ ಸಂದರ್ಭವನ್ನು ಅರಿಯುವುದು ಮತ್ತಷ್ಟು ಜಟಿಲಗೊಂಡಿದೆ. ನರೇಂದ್ರ ಗಿರಿ ಅವರು ಸಾವಿಗೆ ಶರಣಾಗುವುದಕ್ಕೆ ಬಳಸಿದ್ದ ಹಳದಿ ನೈಲಾನ್ ಹಗ್ಗವನ್ನು ಮೂರು ಭಾಗಗಳನ್ನಾಗಿ ತುಂಡು ಮಾಡುತ್ತಿರುವುದು ಈ ವಿಡಿಯೋದಲ್ಲಿ ಬಹಿರಂಗೊಂಡಿದೆ.

ಒಂದು ಭಾಗ ನರೇಂದ್ರ ಗಿರಿ ಅವರ ಪಕ್ಕದ ಭಾಗದಲ್ಲಿದೆ. ಮತ್ತೊಂದು ಭಾಗ ಫ್ಯಾನ್ ಮೇಲಿದ್ದು ಇನ್ನೊಂದು ಭಾಗ ಮೂರನೇ ಭಾಗ ಟೇಬಲ್ ಮೇಲಿದೆ.

ಕೋಠಡಿಯನ್ನು ಪೊಲೀಸ್ ಅಧಿಕಾರಿಗಳು ಪ್ರವೇಶಿಸಿದಾಗ ಫ್ಯಾನ್ ಪೂರ್ಣ ವೇಗದಲ್ಲಿ ತಿರುಗುತ್ತಿತ್ತು. ನರೇಂದ್ರ ಗಿರಿ ಅವರು ನೇಣುಬಿಗಿದುಕೊಂಡ ಫ್ಯಾನ್ ನ್ನು ಯಾರು ಚಾಲು ಮಾಡಿದ್ದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಕೇಳುತ್ತಿದ್ದದ್ದು ವಿಡಿಯೋದಲ್ಲಿ ದಾಖಲಾಗಿದೆ.

SCROLL FOR NEXT