ದೇಶ

ಭವಾನಿಪುರ ಉಪ ಚುನಾವಣೆ: ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ನಾಯಕ ದಿಲೀಪ್ ಘೋಷ್ ಮೇಲೆ ದಾಳಿ ಆರೋಪ, ವರದಿ ಕೇಳಿದ ಇಸಿ

Lingaraj Badiger

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸುವ ಭವಾನಿಪುರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಸೋಮವಾರ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಟಿಎಂಸಿ ಬೆಂಬಲಿಗರು ದಿಲೀಪ್ ಘೋಷ್ ಅವರನ್ನು ತಳ್ಳಿ, ಅವರಿಗೆ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಕೆಲವು ಟಿಎಂಸಿ ಕಾರ್ಯಕರ್ತರು ದಿಲೀಪ್ ಘೋಷ್ ಅವರ ಮಾರ್ಗ ಬಂದ್ ಮಾಡಿ ಅವರನ್ನು ರಸ್ತೆ ಬದಿಗೆ ತಳ್ಳಿದರು ಮತ್ತು ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದರು ಎಂದು ವರದಿಯಾಗಿದೆ.

ದಿಲೀಪ್ ಘೋಷ್ ಅವರು ಭವಾನಿಪುರ ಕ್ಷೇತ್ರದ ಜೋಡುಬಾಬರ್ ಬಜಾರ್ ಪ್ರದೇಶದ ಲಸಿಕಾ ಶಿಬಿರದೊಳಗೆ ಹೋದಾಗ ಈ ಘಟನೆ ನಡೆದಿದೆ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದಂತೆ ದಿಲೀಪ್ ಘೋಷ್ ಅವರ ವೈಯಕ್ತಿಕ ಭದ್ರತೆ ಸಿಬ್ಬಂದಿ ಜನಸಮೂಹವನ್ನು ಚದುರಿಸಲು ಪಿಸ್ತೂಲ್ ತೋರಿಸಿದರು ಎನ್ನಲಾಗಿದೆ.

ಟಿಎಂಸಿ ಬೆಂಬಲಿಗರ ಪ್ರಚೋದನೆಯಿಂದಲೇ ಈ "ದಾಳಿ" ನಡೆದಿದೆ. ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತ ಗಾಯಗೊಂಡಿದ್ದಾರೆ. "ನಾವು ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ. ಇದು ಯಾವ ರೀತಿಯ ಚುನಾವಣೆ?" ಎಂದು ಘೋಷ್ ಪ್ರಶ್ನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.

ಇನ್ನೂ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಪರ ಪ್ರಚಾರ ಮಾಡುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು "ಗೋ ಬ್ಯಾಕ್" ಘೋಷಣೆಗಳನ್ನು ಕೂಗಿದರು.

SCROLL FOR NEXT