ದೇಶ

ಕಾಂಗ್ರೆಸ್ ಅಭ್ಯರ್ಥಿ ರಾಜ್ಯಸಭೆ ಆಯ್ಕೆಗೆ ಸಹಕರಿಸಲು ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆದ ಬಿಜೆಪಿ!

Srinivas Rao BV

ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ ರಜನಿ ಪಾಟೀಲ್ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಅಚ್ಚರಿಯ ರೀತಿಯಲ್ಲಿ ಮಹಾರಾಷ್ಟ್ರದ ವಿರೋಧಪಕ್ಷ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಹಕರಿಸಿದ್ದು ಕಾಂಗ್ರೆಸ್ ನ ಮನವಿಯ ಮೇರೆಗೆ ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆದಿದೆ.

ರಾಜ್ಯಸಭೆಯ ಉಪಚುನಾವಣೆಗೆ ಮುಂದಿನ ತಿಂಗಳು ಮತದಾನ ನಡೆಯಬೇಕಿತ್ತು. ಕಾಂಗ್ರೆಸ್ ನ ಸಂಸದ ರಾಜೀವ್ ಸತ್ವ ಅವರು ಮೇ ತಿಂಗಳಲ್ಲಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಬೇಕಿದೆ. ದಿವಂಗತ ರಾಜೀವ್ ಅವರ ಅಧಿಕಾರಾವಧಿ 2026 ರ ಏಪ್ರಿಲ್ 2 ಕ್ಕೆ ಮುಕ್ತಾಯಗೊಳ್ಳುತ್ತಿತ್ತು.

ಅ.4 ರ ಉಪಚುನಾವಣೆಗೆ ಸೆ.27 ರಂದು ನಾಮಪತ್ರ ಹಿಂಪಡೆಯುವುದಕ್ಕೆ ಕೊನೆಯ ದಿನವಾಗಿತ್ತು. ಬಿಜೆಪಿ ಸಂಜಯ್ ಉಪಾಧ್ಯಾಯ ಅವರನ್ನು ಕಣಕ್ಕಿಳಿಸಿತ್ತು. ಈಗ ಪಾಟೀಲ್ ಅವರಿಗೆ ಹಾದಿ ಸುಗಮಗೊಳಿಸುವುದಕ್ಕಾಗಿ ಬಿಜೆಪಿ ತನ್ನ ಅಭ್ಯರ್ಥಿಯ ನಾಮಪತ್ರವನ್ನು ವಾಪಸ್ ಪಡೆಯುವಂತೆ ಮಾಡಿದೆ. ಚುನಾವಣಾ ಕಣದಲ್ಲಿ ಉಪಾಧ್ಯಾಯ ಹಾಗೂ ಪಾಟೀಲ್ ಇಬ್ಬರೇ ಇದ್ದಿದ್ದರಿಂದ ಪಾಟೀಲ್ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತಗೊಂಡಿದೆ.

ಉಪಾಧ್ಯಾಯ ಈ ಬಗ್ಗೆ ಮಾತನಾಡಿದ್ದು ರಾಜ್ಯದ ಕಾಂಗ್ರೆಸ್ ನಾಯಕರು ಬಿಜೆಪಿಗೆ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದ್ದರಿಂದ ಪಕ್ಷದ ನಿರ್ದೇಶನದ ಪ್ರಕಾರ ನಾನು ನನ್ನ ನಾಮಪತ್ರವನ್ನು ಹಿಂಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ನಾಮಪತ್ರ ಹಿಂಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಉಪಾಧ್ಯಾಯ ತಿಳಿಸಿದ್ದಾರೆ. ಕಳೆದ ವಾರ ಮಹಾರಾಷ್ಟ್ರ ಕಾಂಗ್ರೆಸ್ ನ ಅಧ್ಯಕ್ಷ ನಾನಾ ಪಟೋಲೆ ಹಾಗೂ ಅವರ ಸಹೋದ್ಯೋಗಿ ಸಚಿವ ಬಾಳಾಸಾಹೇಬ್ ಥೋರಟ್ ಅವರು ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.

SCROLL FOR NEXT