ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ: ಓರ್ವ ಉಗ್ರ ಹತ, ಮತ್ತೋರ್ವ ಶರಣಾಗತಿ

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಡಗಿ ಕುಳಿತಿದ್ದ ಉಗ್ರರ ಮೇಲೆ ಸೇನೆ ದಾಳಿ ಮಾಡಿದೆ.

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಇಂದು ಈ ದಾಳಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಓರ್ವ ಉಗ್ರಗಾಮಿಯನ್ನು ಸೇನೆ ಹೊಡೆದುರುಳಿಸಿದ್ದು, ಮತ್ತೋರ್ವ ಉಗ್ರ ಸೈನಿಕರ ಬಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಲಷ್ಕರ್ ಇ ತೊಯ್ಬಾ ಸಂಘಟನೆ ಕಮಾಂಡರ್  ರಿಯಾಜ್ ಸತ್ರ್ ಗುಂಡ್ ಎಂಬ ಉಗ್ರ ನಾಯಕ ತನಗೆ ಒಂದು ಅಡಗುದಾಣ ನಿರ್ಮಿಸಿಕೊಡುವಂತೆ ಕೇಳಿದ್ದು, ಆತನ ಆದೇಶದ ಮೇರೆದೆ ಸಂಘಟನೆ ಇಬ್ಬರು ಉಗ್ರರು ನೌಹಟ್ಟಾದ ರಜೌರಿ ಕದಲ್ ನಲ್ಲಿ ಅಡಗುತಾಣ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಚಾರ ತಿಳಿದು ಎಚ್ಚೆತ್ತ ಸೇನೆ ಉಗ್ರರ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಕಲೆಹಾಕಿ ಇಂದು ಮುಂಜಾನೆ ಪ್ರದೇಶವನ್ನು ಸುತ್ತುವರೆದಿತ್ತು. 

ಶ್ರೀನಗರ ಪೊಲೀಸರು ಮತ್ತು ಸೇನೆಯ 50RR ದಳದ ಸೈನಿಕರು ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದರು. ಪುಲ್ವಾಮದಿಂದಲೇ ಶೋಧ ನಡೆಸಿಕೊಂಡು ಬಂದಿದ್ದ ಸೈನಿಕಿರಿಗೆ ನೌಹಟ್ಟಾದಲ್ಲಿ ಉಗ್ರರ ಅಡಗುದಾಣ ದೊರೆತಿತ್ತು. ಈ ವೇಳೆ ಅಲ್ಲಿದ್ದ ಇಬ್ಬರು ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಆದರೆ ಪ್ರತಿದಾಳಿ ನಡೆಸಿದ ಸೇನೆ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರನನ್ನು ಹೊಡೆದುರುಳಿಸಿತು. ಈ ವೇಳೆ ಅಲ್ಲಿಯೇ ಇದ್ದ ಮತ್ತೋರ್ವ ಉಗ್ರ ಸೈನಿಕರ ಮಾತಿನಂತೆ ಶರಣಾಗಿದ್ದಾನೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT