ದೇಶ

ಸಂಜಯ್ ರಾವುತ್ ಅವರನ್ನು ಬಂಧಿಸಿರುವುದು ಶಿವಸೇನೆಯನ್ನು ನಾಶಪಡಿಸುವ ಪಿತೂರಿಯ ಭಾಗ: ಉದ್ಧವ್ ಠಾಕ್ರೆ

Ramyashree GN

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಂದದ ಸಂಜಯ್ ರಾವುತ್ ಅವರನ್ನು ಬಂಧಿಸಿರುವುದು ಶಿವಸೇನೆಯನ್ನು ನಾಶಪಡಿಸುವ ಸಂಚಿನ ಭಾಗವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಆರೋಪಿಸಿದ್ದಾರೆ.

'ನನಗೆ ಸಂಜಯ್ ರಾವುತ್ ಬಗ್ಗೆ ಹೆಮ್ಮೆ ಇದೆ. ಇದು ನಮ್ಮನ್ನು ನಾಶಮಾಡುವ ಪಿತೂರಿ. ನಮ್ಮ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಅಳಿಸಿ ಹಾಕಬೇಕು ಎನ್ನುವ ಇಂತಹ ಮನಸ್ಥಿತಿಯು ಸೇಡಿನ ರಾಜಕಾರಣವನ್ನು ಸೂಚಿಸುತ್ತದೆ' ಎಂದು ಠಾಕ್ರೆ ಹೇಳಿದ್ದಾರೆ.

ಮುಂಬೈನಲ್ಲಿ ಪತ್ರಾ ಚಾಲ್ ಭೂ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಭಾನುವಾರ ಬಂಧಿಸಿದೆ.

ರಾವುತ್ ಅವರ ಕುಟುಂಬವನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಠಾಕ್ರೆ,  'ಕಾಂಗ್ರೆಸ್ ಕೂಡ 60 ರಿಂದ 65 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಈಗ ಅವರನ್ನು ನೋಡಿ. ಯಾವುದೂ ಶಾಶ್ವತವಲ್ಲ. ಕಳೆದ 2.5 ವರ್ಷಗಳಿಂದ ನಾನು ನಿರ್ವಹಿಸಿದ ಮುಖ್ಯಮಂತ್ರಿ ಸ್ಥಾನದಿಂದ ನಾನು ಕೆಳಗಿಳಿದಿದ್ದೇನೆ. ಆದರೆ, ಈಗ ನಾನು ಮಮತಾ ಬ್ಯಾನರ್ಜಿ ಮತ್ತು ಕೆಎಸ್‌ಆರ್‌ನಂತಹ ಪ್ರಾದೇಶಿಕ ಪಕ್ಷದ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಪ್ರಾದೇಶಿಕ ಶಕ್ತಿಗಳನ್ನು ನಾಶಮಾಡಲು ಬಿಜೆಪಿ ಯೋಜಿಸುತ್ತಿದೆ' ಎಂದು ದೂರಿದರು.

'ಮಹಾರಾಷ್ಟ್ರದ ರಾಜ್ಯಪಾಲ ಭರತ್ ಸಿಂಗ್ ಕೋಶಿಯಾರಿ ಅವರ 'ಗುಜರಾತಿಗಳು-ರಾಜಸ್ಥಾನಿಗಳು' ಹೇಳಿಕೆಯು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವನ್ನು ಸಾಬೀತುಪಡಿಸಿದೆ. ಅವರು (ಬಿಜೆಪಿ) ವಿಭಜನೆ ಮಾಡುವ ರಾಜಕೀಯವನ್ನು ಮಾಡುತ್ತಿದ್ದಾರೆ. ಇದು ತುಂಬಾ ಹಾನಿಕಾರಕ' ಎಂದು ಅವರು ಹೇಳಿದರು.

ಭಾನುವಾರ ಮಧ್ಯರಾತ್ರಿಯ ನಂತರ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇ.ಡಿಯ ವಲಯ ಕಚೇರಿಯಲ್ಲಿ ಆರು ಗಂಟೆಗಳ ಕಾಲ ವಿಚಾರಣೆ ನಂತರ 60 ವರ್ಷದ ರಾವುತ್ ಅವರನ್ನು ಬಂಧಿಸಲಾಯಿತು.

ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಒಂಬತ್ತು ಗಂಟೆಗಳ ಸುದೀರ್ಘ ದಾಳಿಯಲ್ಲಿ ಸಂಜಯ್ ರಾವುತ್ ಅವರ ನಿವಾಸದಿಂದ ಇ.ಡಿ 11.50 ಲಕ್ಷ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದೆ.

ಏಪ್ರಿಲ್‌ನಲ್ಲಿ, ಇ.ಡಿ ಅವರ ಪತ್ನಿ ವರ್ಷಾ ರಾವುತ್, ಅವರ ಸಹಾಯಕ ಪ್ರವೀಣ್ ರಾವುತ್ ಮತ್ತು ಸಂಜಯ್ ರಾವುತ್ ಅವರ ಇನ್ನೊಬ್ಬ ನಿಕಟವರ್ತಿ ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಅವರಿಗೆ ಸೇರಿದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

SCROLL FOR NEXT