ದೇಶ

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿಗೆ ಸಂಬಂಧಿಸಿದ ಮತ್ತೊಂದು ಫ್ಲಾಟ್ ಮೇಲೆ ಇಡಿ ದಾಳಿ

Ramyashree GN

ಕೋಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪದಚ್ಯುತಗೊಂಡ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿಗೆ ಸೇರಿದ ದಕ್ಷಿಣ ಕೋಲ್ಕತ್ತಾದ ಅಪಾರ್ಟ್‌ಮೆಂಟ್‌ನಲ್ಲಿ ಜಾರಿ ನಿರ್ದೇಶನಾಲಯವು ಇಂದು ಶೋಧಕಾರ್ಯ ಕೈಗೊಂಡಿದೆ.

ಪಾರ್ಥ ಚಟರ್ಜಿ ಮತ್ತು ಅವರ ನಿಕಟವರ್ತಿ ನಟಿ ಅರ್ಪಿತಾ ಮುಖರ್ಜಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಫೋರ್ಟ್ ಓಯಸಿಸ್ ಕಾಂಪ್ಲೆಕ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಬೀಗ ಹಾಕಿದ್ದರಿಂದ ಬೀಗ ತೆಗೆಯುವವರನ್ನು ಕರೆಸಲಾಯಿತು.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 23 ರಂದು ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ನಂತರ, ಕೋಲ್ಕತ್ತದಾದ್ಯಂತ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಫ್ಲ್ಯಾಟ್‌ಗಳ ಮೇಲೆ ಅನೇಕ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ ಸುಮಾರು ₹ 50 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ತೃಣಮೂಲ ಕಾಂಗ್ರೆಸ್ ನಾಯಕರಾಗಿದ್ದ ಚಟರ್ಜಿ ಅವರು 2016 ರಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಾಗಿ ತನಿಖಾ ಸಂಸ್ಥೆ ಹೇಳಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಕಳೆದ ವಾರ ಮಮತಾ ಬ್ಯಾನರ್ಜಿ ಸಂಪುಟದಿಂದ ವಜಾಗೊಳಿಸಿ ಮತ್ತು ಪಕ್ಷದಿಂದ ಅಮಾನತುಗೊಳಿಸಿದ್ದರು.

ಇನ್ನೊಂದೆಡೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇ.ಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಕ್ಷವು ಆರೋಪಿಸಿದ್ದು, ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ಒತ್ತಾಯಿಸಿದೆ.

SCROLL FOR NEXT