ದೇಶ

ನಿತಿನ್ ಗಡ್ಕರಿ ಅವರೊಂದಿಗೆ ರಾಜ್ಯಸಭೆಯಲ್ಲಿ ಮಾತುಕತೆ: ಎಲೆಕ್ಟ್ರಿಕ್ ವಾಹನ ಖರೀದಿಸಿದ ಜೈರಾಮ್ ರಮೇಶ್

Ramyashree GN

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವ ಮತ್ತು ಬೆಲೆ ಇಳಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವ ಕುರಿತು ನಡೆದ ಮಾತುಕತೆಯನ್ನು ಶನಿವಾರ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್  ನಾಯಕ, ಭಾರತದಲ್ಲಿ ಕನಿಷ್ಠ ಪಕ್ಷ 2035 ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆಯನ್ನು ಕೊನೆಗೊಳಿಸಬೇಕು ಎಂದು ಪುನರುಚ್ಚರಿಸಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಗಡ್ಕರಿ ಅವರೊಂದಿಗೆ ನಡೆದ ಮಾತುಕತೆಯ ನಂತರ, ನಾನು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದೇನೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

'ಮಾರ್ಚ್ 22 ರಂದು ನಿತಿನ್ ಗಡ್ಕರಿ ಅವರೊಂದಿಗಿನ ಮಾತುಕತೆಯ ನಂತರ, ನಾನು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದೆ. 2035ರ ವೇಳೆಗೆ ಭಾರತದಲ್ಲಿ ಎಲ್ಲಾ ರೀತಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆಯನ್ನು ಕೊನೆಗೊಳಿಸಬೇಕು ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಬೃಹತ್ ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಭಾರತವು ನಿರ್ದಿಷ್ಟ ಮಾರ್ಗಸೂಚಿಯನ್ನು ಹೊಂದಿದೆಯೇ  ಎಂದು ಗಡ್ಕರಿ ಅವರನ್ನು ಕೇಳುತ್ತಾರೆ. ಮುಂದುವರಿದು ಇಲ್ಲದಿದ್ದರೆ ಖಾಸಗಿ ಕಾರು ತಯಾರಕರು ಇದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಹೇಳುತ್ತಾರೆ.

ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಪ್ರಸ್ತುತ ಭಾರತವು 'ಬಹಳಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹೊಂದಿದೆ ಮತ್ತು ಅದಕ್ಕಾಗಿಯೇ ಸರ್ಕಾರವು ರದ್ದತಿ ನೀತಿಯನ್ನು ಪ್ರಾರಂಭಿಸಿದೆ. ಒಂದು 'ಹಳೆಯ ವಾಹನ'ದಿಂದ ಉತ್ಪತ್ತಿಯಾಗುವ ಮಾಲಿನ್ಯದ ಪ್ರಮಾಣವು ನಾಲ್ಕು ಹೊಸ ವಾಹನಗಳಿಂದ ಉತ್ಪತ್ತಿಯಾಗುವಷ್ಟು ಮಾಲಿನ್ಯಕ್ಕೆ ಸಮನಾಗಿರುತ್ತದೆ ಎಂದು ಅವರು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲು 2035 ಅಥವಾ 2040ಕ್ಕೆ ಗಡುವು ನೀಡುವ ಯಾವುದೇ 'ಸ್ಥಿರ ಕಾರ್ಯಕ್ರಮ'ಕ್ಕೆ ಕರೆ ನೀಡಬೇಡಿ ಎಂದು ಅವರು ಕಾಂಗ್ರೆಸ್ ಸಂಸದರಿಗೆ ಮನವಿ ಮಾಡಿದರು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ನೈಸರ್ಗಿಕ ಆಯ್ಕೆಯಾಗಿರುತ್ತವೆ. ಏಕೆಂದರೆ ಇವು ಕಡಿಮೆ ವೆಚ್ಚದಾಯಕ ಎಂದು ಗಡ್ಕರಿ ಪ್ರತಿಪಾದಿಸಿದರು.

SCROLL FOR NEXT