ದೇಶ

ಬಿಹಾರ ಸರ್ಕಾರದಲ್ಲಿ ಅಸ್ಥಿರ ಮೈತ್ರಿ: ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ನಿತೀಶ್ ಕುಮಾರ್

Sumana Upadhyaya

ಪಾಟ್ನಾ: ಬಿಹಾರ ಸರ್ಕಾರದಲ್ಲಿ ನಡೆಯುತ್ತಿರುವ ಬಿರುಸಿನ ರಾಜಕೀಯ ಚಟುವಟಿಕೆ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲ ಫಾಗು ಚೌಹಾಣ್ ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ಶನಿವಾರ ಪಕ್ಷದ ನಾಯಕ ಆರ್ ಸಿಪಿ ಸಿಂಗ್ ಅವರ ರಾಜೀನಾಮೆ ನಂತರ ಜೆಡಿಯುನ ಎಲ್ಲಾ ಶಾಸಕರು ಮತ್ತು ಸಂಸದರು ಅವರ ನಿವಾಸದಲ್ಲಿ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. 

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಅಪರಾಹ್ನ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಇಂದು ಬೆಳಗ್ಗೆ ಸಭೆ ನಡೆಸಿದ ಜೆಡಿಯುನ ಎಲ್ಲಾ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ತಾವೆಲ್ಲರೂ ಬದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. 

ಸಭೆಯಲ್ಲಿ ಬಿಜೆಪಿಯೊಂದಿಗಿನ ಸಖ್ಯವನ್ನು ಜೆಡಿಯು ತೊರೆಯಲು ನಿರ್ಧರಿಸಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ಬಿರುಸಿನ ರಾಜಕೀಯ ಚಟುವಟಿಕೆ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿರುವ ಸಿಎಂ ನಿತೀಶ್ ಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 

ಈ ಮಧ್ಯೆ, ಕಾಂಗ್ರೆಸ್ ಮತ್ತು ಎರಪಕ್ಷಗಳ ನಾಯಕರು ಮತ್ತು ಶಾಸಕರು ಇಂದು ಆರ್ ಜೆಡಿ ನಾಯಕಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ ಎಂದು ಕೂಡ ತಿಳಿದುಬಂದಿದೆ. 

ಇನ್ನೊಂದೆಡೆ ಬಿಜೆಪಿ ಕೂಡ ಉಪಮುಖ್ಯಮಂತ್ರಿ ತಾರ್ಕಿಶೋರ ಪ್ರಸಾದ್ ನಿವಾಸದಲ್ಲಿ ಉನ್ನತ ನಾಯಕರ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಹಾರ ಸರ್ಕಾರದ ಪರಿಸ್ಥಿತಿ ಯಾವ ದಿಕ್ಕಿನತ್ತ ಹೊರಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

SCROLL FOR NEXT