ದೇಶ

ಬಿಹಾರ: ನಿತೀಶ್ ಕುಮಾರ್ ಗೆ ಮಹಾಘಟಬಂಧನ್ 7 ಪಕ್ಷಗಳ 164 ಶಾಸಕರು ಸಾಥ್; ಬಿಜೆಪಿ ಬಹುತೇಕ ಏಕಾಂಗಿ!

Srinivas Rao BV

ಪಾಟ್ನ: ಬಿಹಾರದಲ್ಲಿ ಎನ್ ಡಿಎ, ಬಿಜೆಪಿ ಮೈತ್ರಿ ಮುರಿದುಕೊಂಡಿರುವ ನಿತೀಶ್ ಕುಮಾರ್ ಎರಡನೇ ಬಾರಿಗೆ ಆರ್ ಜೆಡಿ, ಕಾಂಗ್ರೆಸ್ ಇತ್ಯಾದಿ ಮಹಾಘಟಬಂಧನ್ ನಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ಬೆಂಬಲದೊಂದಿಗೆ ಸಿಎಂ ಆಗುತ್ತಿದ್ದಾರೆ. 

ನಿತೀಶ್ ಕುಮಾರ್ ಗೆ ಮಹಾಘಟಬಂಧನ್ ನ 7 ಪಕ್ಷಗಳು, 164 ಶಾಸಕರು ಬೆಂಬಲ ಘೋಷಿಸಿದ್ದು, ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿದೆ. 

ಈ ಹಿಂದೆ ನಿತೀಶ್ ಕುಮಾರ್ ಅವರಿಂದ ತೆರವಾಗಿದ್ದ ಸಿಎಂ ಸ್ಥಾನವನ್ನು ಅಲಂಕರಿಸಿದ್ದ, ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂಸ್ಥಾನಿ ಅವಾಮ್ ಮೋರ್ಚಾ ಪಕ್ಷ ಸ್ಥಾಪಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಿತನ್ ರಾಮ್ ಮಾಂಝಿ ಸಹ ಈಗ ಎನ್ ಡಿಎ ತೊರೆದು ನಿತೀಶ್ ಕುಮಾರ್ ಜೊತೆ ಮಹಾಘಟಬಂಧನ್ ಜೊತೆ ಕೈ ಜೋಡಿಸಿದ್ದಾರೆ. 

ಹೆಚ್ಎಎಂ ಪಕ್ಷದಿಂದ ವಿಧಾನಸಭೆಗೆ 4 ಶಾಸಕರು ಆಯ್ಕೆಯಾಗಿದ್ದಾರೆ. ತಮ್ಮ ಪಕ್ಷದ ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡುವುದೇ ಸೂಕ್ತ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಮಾಂಝಿ ಹೇಳಿದ್ದಾರೆ.

ಬಿಹಾರದ ಪ್ರಾದೇಶಿಕ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಈಗ ನಿತೀಶ್ ಕುಮಾರ್ ಬೆಂಬಲಕ್ಕೆ ನಿಂತಿದ್ದು, 243 ಶಾಸಕರ ಪೈಕಿ 164 ಶಾಸಕರು ತಮ್ಮ ಬೆಂಬಲ ನಿತೀಶ್ ಕುಮಾರ್ ಗೆ ಎಂದು ಘೋಷಿಸಿದ್ದಾರೆ. ಆರ್ ಜೆಡಿ-79 ಶಾಸಕರು, ಬಿಜೆಪಿ-77, ಜೆಡಿಯು-45, ಕಾಂಗ್ರೆಸ್ 19 ಶಾಸಕರು, ಎಡಪಕ್ಷಗಳು 16 ಶಾಸಕರನ್ನು ಹೊಂದಿವೆ.
 
ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರ ಲೋಕಜನಶಕ್ತಿ ಪಕ್ಷ ಮಾತ್ರ ಬಿಹಾರದಲ್ಲಿ ಬಹುತೇಕ ಎಲ್ಲಾ ಮಿತ್ರಪಕ್ಷಗಳನ್ನೂ ಕಳೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್ ಡಿಎ ಜೊತೆ ಈಗ ಉಳಿದುಕೊಂಡಿದೆ.

SCROLL FOR NEXT