ದೇಶ

ಬಿಹಾರ: ಮಹಾಘಟಬಂಧನ್ ಸರ್ಕಾರ, ಬುಧವಾರ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ

Nagaraja AB

ಪಾಟ್ನಾ: ಬಿಹಾರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಬೆಂಬಲದೊಂದಿಗೆ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಆರ್ ಜೆಡಿ ಪಕ್ಷದ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುಧವಾರ ಮಧ್ಯಾಹ್ನ 2 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜಭವನದ ಒಳಗಡೆ ಸರಳವಾಗಿ ಸಮಾರಂಭ ನಡೆಯಲಿದೆ. ನಂತರದ ಹಂತಗಳಲ್ಲಿ ಹೆಚ್ಚಿನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಜೆಡಿಯು ಹಾಗೂ ಆರ್ ಜೆಡಿ ಮೂಲಗಳು ತಿಳಿಸಿವೆ.

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟದಿಂದ ಹೊರಗೆ ಬಂದಿರುವ ನಿತೀಶ್ ಕುಮಾರ್ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಿಗೆ ಮಹಾಘಟಬಂದನ್ ನ ಏಳು ಪಕ್ಷಗಳು, 164 ಶಾಸಕರು ಬೆಂಬಲ ಘೋಷಿಸಿವೆ. ಹಿಂದೂಸ್ಥಾನಿ ಅವಾಮ್ ಮೋರ್ಚಾ ಪಕ್ಷ ಸ್ಥಾಪಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಿತನ್ ರಾಮ್ ಮಾಂಝಿ ಸಹ ಈಗ ಎನ್ ಡಿಎ ತೊರೆದು ನಿತೀಶ್ ಕುಮಾರ್ ಜೊತೆ ಮಹಾಘಟಬಂಧನ್ ಜೊತೆ ಕೈ ಜೋಡಿಸಿದ್ದಾರೆ. 

SCROLL FOR NEXT