ದೇಶ

ಈ ರೊಟ್ಟಿನ ನಾಯಿ ಸಹ ತಿನ್ನಲ್ಲ: ಆಹಾರದ ಗುಣಮಟ್ಟ ನೋಡಿ ಕಣ್ಣೀರಿಟ್ಟ ಉತ್ತರ ಪ್ರದೇಶ ಪೋಲೀಸ್, ವಿಡಿಯೋ ವೈರಲ್

Lingaraj Badiger

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್‌ನಲ್ಲಿರುವ ಮೆಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಕಾನ್‌ಸ್ಟೆಬಲ್ ಒಬ್ಬರು ತಮ್ಮ ಅಳಲು ತೋಡಿಕೊಂಡು ಧರಣಿ ಕುಳಿತಿರುವ ವಿಡಿಯೋವೊಂದು ಈಗ ವೈಲ್ ಆಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋ ಕ್ಲಿಪ್‌ನಲ್ಲಿ, ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅವರು ಕಳಪೆ ಗುಣಮಟ್ಟದ ಆಹಾರದ ತಟ್ಟೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದು, ಈ ರೊಟ್ಟಿಯನ್ನು ನಾಯಿ ಸಹ ತಿನ್ನಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಪೊಲೀಸ್ ಪೇದೆಗಳಿಗೆ ಪೌಷ್ಠಿಕ ಆಹಾರಕ್ಕಾಗಿ ಪ್ರತ್ಯೇಕವಾಗಿ 1,875 ರೂಪಾಯಿಗಳನ್ನು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭರವಸೆಯನ್ನು ಕುಮಾರ್ ಉಲ್ಲೇಖಿಸಿದ್ದಾರೆ.

ಈ ವಿಚಾರವನ್ನು ಗಮನಿಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ಅವರು ತನಿಖೆಗೆ ಆದೇಶಿಸಿದ್ದಾರೆ.

ಈ ವಿಷಯವನ್ನು ಗಮನಿಸಲಾಗಿದೆ ಮತ್ತು ಅವ್ಯವಸ್ಥೆಯ ಬಗ್ಗೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ತನಿಖೆ ಮಾಡಲು ಸರ್ಕಲ್ ಅಧಿಕಾರಿ (ನಗರ) ಅಭಿಷೇಕ್ ಶ್ರೀವಾಸ್ತವ ಅವರಿಗೆ ಸೂಚಿಸಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಅಶಿಸ್ತು ಮತ್ತು ಕರ್ತವ್ಯಕ್ಕೆ ಗೈರು ಸೇರಿದಂತೆ ಈ ಕಾನ್ಸ್‌ಟೇಬಲ್ ವಿರುದ್ಧ 15 ಪ್ರಕರಣಗಳು ಬಾಕಿ ಇವೆ. ಅವುಗಳ ಬಗ್ಗೆಯೂ ತನಿಖೆ ನಡೆಸುವಂತೆ ಪೊಲೀಸ್ ಲೈನ್ಸ್ ಸರ್ಕಲ್ ಆಫೀಸರ್ ಹೀರಾ ಲಾಲ್ ಕನೌಜಿಯಾ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

SCROLL FOR NEXT