ದೇಶ

ಐಎಎಸ್ ಗೆ ಮರಳಿದ 3 ತಿಂಗಳ ನಂತರ ಕೇಂದ್ರ ಪ್ರವಾಸೋದ್ಯಮ ಉಪ ಕಾರ್ಯದರ್ಶಿಯಾಗಿ ಶಾ ಫೈಸಲ್ ನೇಮಕ

Lingaraj Badiger

ನವದೆಹಲಿ: ಐಎಎಸ್ ತೊರೆದು ರಾಜಕೀಯ ಪಕ್ಷ ಕಟ್ಟಿದ್ದ ಶಾ ಫೈಸಲ್ ಅವರು ಮತ್ತೆ ಐಎಎಸ್ ಗೆ ಹುದ್ದೆಗೆ ಮರಳಿದ ಮೂರು ತಿಂಗಳ ನಂತರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೇಡರ್‌ನ 2010-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಶಾ ಫೈಸಲ್ ಅವರ ರಾಜೀನಾಮೆ ವಾಪಸ್ ಪಡೆಯುವ ಅರ್ಜಿಯನ್ನು ಸ್ವೀಕರಿಸಿದ್ದ ಕೇಂದ್ರ ಸರ್ಕಾರ, ಕಳೆದ ಏಪ್ರಿಲ್ ನಲ್ಲಿ ಅವರನ್ನು ಮತ್ತೆ ಐಎಎಸ್ ಗೆ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆದರೆ ಹುದ್ದೆ ನೀಡಿರಲಿಲ್ಲ.

ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಮೊದಲ ಟಾಪರ್ ಆಗಿದ್ದ ಫೈಸಲ್, ಈ ವರ್ಷದ ಆರಂಭದಲ್ಲಿ ಸರ್ಕಾರಿ ಸೇವೆಗೆ ಮರಳುವ ಬಗ್ಗೆ ಸುಳಿವು ನೀಡಿದ್ದರು. 

ಫೈಸಲ್ ಅವರು 2019ರ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ (ಜೆಕೆಪಿಎಂ) ಎಂಬ ರಾಜಕೀಯ ಪಕ್ಷ ಹುಟ್ಟುಹಾಕಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಬಳಿಕ ಅವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಲಾಗಿತ್ತು.

ಆದರೆ ಬಿಡುಗಡೆ ಬಳಿಕ ಫೈಸಲ್ ರಾಜಕೀಯವನ್ನು ತೊರೆದು ಸಾರ್ವಜನಿಕ ಸೇವೆಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಿರಲಿಲ್ಲ. ಮೂಲತಃ ವೈದ್ಯರಾಗಿದ್ದ ಇವರು ಪ್ರಜಾಸತ್ತಾತ್ಮಕ ರಾಜಕೀಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿದ ಪಕ್ಷ ಹುಟ್ಟುಹಾಕಿದ್ದರು. ಆದರೆ ಅವರ ರಾಜಕೀಯ ವೃತ್ತಿ ಹಠಾತ್ತನೇ ಅಂತ್ಯವಾಗಿದೆ.

SCROLL FOR NEXT