ದೇಶ

ವಿಮಾನದೊಳಗೆ ಧೂಮಪಾನ: ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ವಿರುದ್ಧ ಪ್ರಕರಣ ದಾಖಲು

Vishwanath S

ನವದೆಹಲಿ: ಸ್ಪೈಸ್‌ಜೆಟ್‌ ವಿಮಾನದಲ್ಲಿ ಸಿಗರೇಟ್‌ ಹಚ್ಚುತ್ತಿರುವ ವಿಡಿಯೋ ವೈರಲ್ ಬೆನ್ನಲ್ಲೇ ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೈಸ್‌ಜೆಟ್‌ನ ಕಾನೂನು ಮತ್ತು ಕಂಪನಿ ವ್ಯವಹಾರಗಳ ವ್ಯವಸ್ಥಾಪಕ ಜಸ್ಬೀರ್ ಸಿಂಗ್ ಅವರು ಆಗಸ್ಟ್ 13ರಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಉಲ್ಲಂಘನೆಯ ಆರೋಪದ ಮೇಲೆ ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2022ರ ಜನವರಿಯಲ್ಲಿ ದುಬೈನಿಂದ ದೆಹಲಿಗೆ ಬಂದ ಸ್ಪೈಸ್‌ಜೆಟ್ ವಿಮಾನ SG 706 ನಲ್ಲಿ ಲೈಟರ್‌ನೊಂದಿಗೆ ಸಿಗರೇಟು ಹಚ್ಚಿದ್ದ ಬಲ್ವಂತ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಫೋಟೋ ಮತ್ತು ವೀಡಿಯೊ ಅಪ್‌ಲೋಡ್ ಮಾಡಿದ್ದರು ಎಂದು ಜಸ್ಬೀರ್ ಸಿಂಗ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಬಾಡಿಬಿಲ್ಡರ್ ಆಗಿರುವ ಕಟಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ 6.3 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

ದೂರಿನ ಆಧಾರದ ಮೇಲೆ ಐಜಿಐ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸುರಕ್ಷತೆ ಕಾಯ್ದೆ 1982ರ ವಿರುದ್ಧ ಕಾನೂನುಬಾಹಿರ ಕಾಯಿದೆಗಳ ನಿಗ್ರಹದ ಸೆಕ್ಷನ್ 3(1)(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದರು.

ಕಳೆದ ವಾರ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕಾಣಿಸಿಕೊಂಡ ನಂತರ ತನಿಖೆಗೆ ಆದೇಶಿಸಿದ್ದರು.

SCROLL FOR NEXT