ದೇಶ

ಗುಜರಾತ್ ಗಲಭೆ ಪ್ರಕರಣ: ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ತೀಸ್ತಾ, ಆ.22 ರಂದು ವಿಚಾರಣೆ

Srinivas Rao BV

ನವದೆಹಲಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್  ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಆ.22 ರಂದು ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಒಪ್ಪಿಗೆ ನೀಡಿದೆ.

ಗಲಭೆ ಪ್ರಕರಣದಲ್ಲಿ ದಾಖಲೆಗಳನ್ನು ತಯಾರು ಮಾಡಿ ಮುಗ್ಧರ ವಿರುದ್ಧ ಆರೋಪ ಹೊರಿಸಿದ್ದಕ್ಕಾಗಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ನ್ಯಾ. ಎನ್.ವಿ ರಮಣ ಹಾಗೂ ನ್ಯಾ. ಜೆಕೆ ಮಹೇಶ್ವರಿ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರಿದ್ದ ಪೀಠ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ.ಯುಯು ಲಲಿತ್ ಅವರ ಪೀಠಕ್ಕೆ ವರ್ಗಾವಣೆ ಮಾಡಿದೆ. ಅರ್ಜಿದಾರರ ಪರ ವಕೀಲರಾದ ಅರ್ಪಣಾ ಭಟ್ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. 

ಆ.3 ರಂದು ಗುಜರಾತ್ ಹೈಕೋರ್ಟ್ ಎಸ್ ಐಟಿಗೆ ನೊಟೀಸ್ ಜಾರಿಗೊಳಿಸಿ ಸೆಟಲ್ವಾಡ್ ಹಾಗೂ ಗುಜರಾತ್ ನ ಮಾಜಿ ಡಿಜಿಪಿ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಳಿ ಸೆ.19 ಕ್ಕೆ ವಿಚಾರಣೆ ಮುಂದೂಡಿತ್ತು. ಈ ಆದೇಶವನ್ನು ಸೆಟಲ್ವಾಡ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಅಹ್ಮದಾಬಾದ್ ನ ಸಿಟಿ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಸೆಟಲ್ವಾಡ್ ಹಾಗೂ ಶ್ರೀ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. 

SCROLL FOR NEXT