ದೇಶ

ಹಿಮಾಚಲ ಪ್ರದೇಶ: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು, 8 ಮಂದಿಗೆ ಗಾಯ

Lingaraj Badiger

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

17-ಮೈಲ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ, ಪುರುಷ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಉತ್ತರಪ್ರದೇಶದ ಲಲಿತ್‌ಪುರ ಮೂಲದ ರೋಹಿತ್ ಕೌಶಿಕ್(23) ಮತ್ತು ಮಾನ್ಸಿ (23) ಎಂದು ಗುರುತಿಸಲಾಗಿದೆ.

ಜಿಲ್ಲೆಯ ಮಂಡಿಯ ಖುರಿ ಬಾಲ್‌ನಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಶುಕ್ರವಾರ ಬೆಳಗ್ಗೆ ಡಸ್ಟರ್ ಕಾರೊಂದು ಕಮರಿಗೆ ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆರ್ಚೋಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತರನ್ನು ಶಿಮ್ಲಾ ಜಿಲ್ಲೆಯ ನರಕಂದ ನಿವಾಸಿ ಅಂಚಲಾ ಇಂದರ್ ನಾಥ್ ಎಂದು ಗುರುತಿಸಲಾಗಿದೆ.

ಪ್ರತ್ಯೇಕ ಅಪಘಾತದಲ್ಲಿ, ಜಿಲ್ಲೆಯ ಚಿಮ್ಟಿ ಮೌಡ್, ತೆಹಸಿಲ್ ತುನಾಗ್, ಮಂಡಿಯಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಥುನಾಗ್ ತಹಸಿಲ್‌ನ ಚತ್ರಿ ಗ್ರಾಮದ ನಿವಾಸಿ ಜೈ ಪ್ರಕೇಶ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಧರ್ವಾ ರೋಹ್ನಾತ್ ಶಿಲ್ಲೈ ಲಿಂಕ್ ರಸ್ತೆಯಲ್ಲಿ ಸ್ವಿಫ್ಟ್ ಕಾರು ಕಮರಿಗೆ ಬಿದ್ದ ನಾಲ್ಕನೇ ಅಪಘಾತ ವರದಿಯಾಗಿದೆ. ದುರ್ಘಟನೆಯ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿಲ್ಲೈ ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT