ದೇಶ

ಲೋಕಸಭಾ ಚುನಾವಣೆ: ಇತರ ಪಕ್ಷಗಳು ಬಯಸಿದರೆ ನಿತೀಶ್‌ ಪ್ರಧಾನಿ ಅಭ್ಯರ್ಥಿ: ಜೆಡಿಯು

Nagaraja AB

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂಬ ಊಹಾಪೋಹ ಹರಡಿರುವಂತೆಯೇ, ಒಂದು ವೇಳೆ ಇತರ ಪಕ್ಷಗಳು ಬಯಸಿದರೆ ಇದು ಪರ್ಯಾಯ ಆಯ್ಕೆಯಾಗಬಹುದು ಎಂದು ಜೆಡಿಯು ಶುಕ್ರವಾರ ಹೇಳಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್  ಗಮನ ಹರಿಸಿದ್ದಾರೆ. ಮುಂದಿನ ವಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಾಸ ಮತ ಯಾಚನೆ ಬಳಿಕ ವಿವಿಧ ಪಕ್ಷಗಳ ಮುಖಂಡರ ಭೇಟಿಯಾಗಿ ನಿತೀಶ್ ಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜೆಡಿಯು ಅಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ.

ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಹೆಚ್ಚಿನ ವರ್ಷ ಆಡಳಿತ ನಡೆಸಿದ್ದಾರೆ. ಆದರೆ, ಅವರು ಪ್ರತಿಪಕ್ಷಗಳ ಪ್ರಧಾನ ಮಂತ್ರಿ ಅಭ್ಯರ್ಥಿ ಅಲ್ಲ. ಇತರ ಪಕ್ಷಗಳು ಬಯಸಿದರೆ ನಂತರ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂದು ಅವರ ಆಪ್ತರಾಗಿರುವ ಸಿಂಗ್ ಪಿಟಿಐ ಗೆ ತಿಳಿಸಿದರು.

ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡ ನಂತರ ಶರದ್ ಪವಾರ್, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಮಂದಿ ನಿತೀಶ್ ಕುಮಾರ್ ಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಎಲ್ಲ ಪ್ರತಿಪಕ್ಷಗಳು ಒಟ್ಟಾಗಿ ಕುಳಿತು ನಾಯಕತ್ವದ ಬಗ್ಗೆ ನಿರ್ಧರಿಸಬೇಕಾಗಿದೆ ಎಂದರು.

ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ. ನಂತರ ತಮ್ಮ ನಾಯಕ ಯಾರು ಎಂಬುದನ್ನು ನಿರ್ಧರಿಸಬೇಕಾಗಿದೆ. ಎರಡು ಆಯ್ಕೆಗಳಿವೆ. ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಕಾರ್ಯವನ್ನು ನಿತೀಶ್ ಕುಮಾರ್ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. 

SCROLL FOR NEXT