ನವದೆಹಲಿ: 2024ರ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಣ ಹೋರಾಟವಾಗಿರಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಹೇಳಿದ್ದಾರೆ.
ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ಮಾರನೆ ದಿನ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಹೆದರಿಸಲು ಎಲ್ಲಾ ವಿಧಾನಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ನವದೆಹಲಿ: ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಂತರ 12 ಐಎಎಸ್ ಅಧಿಕಾರಿಗಳ ಎತ್ತಂಗಡಿ; ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆದೇಶ
ದೆಹಲಿ ಅಬಕಾರಿ ನೀತಿ ಪಾರದರ್ಶಕವಾಗಿ ಅನುಷ್ಠಾನಗೊಂಡಿದೆ. ಇದರಲ್ಲಿ ಯಾವುದೇ ಹಗರಣವಿಲ್ಲ. ಅರವಿಂದ್ ಕೇಜ್ರಿವಾಲ್ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಕೆಲಸ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ತಡೆಯಲು ಅವರು ಬಯಸಿದ್ದಾರೆ. ನಿನ್ನೆ ನಡೆದ ದಾಳಿ ವೇಳೆಯಲ್ಲಿ ನನ್ನ ಕುಟುಂಬಕ್ಕೆ ಯಾವುದೇ ತೊಂದರೆ ನೀಡದಿದ್ದಕ್ಕೆ ಸಿಬಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸಿಬಿಐನಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ಆದರೆ, ದಾಳಿ ಮಾಡುವಂತೆ ಅವರ ಮೇಲಿನವರಿಂದ ಆದೇಶ ಬಂದಿರುತ್ತದೆ ಎಂದರು.
ದೇಶದ ಜನರ ಪ್ರೀತಿ ಗಳಿಸಿರುವ ಹಾಗೂ ಪರ್ಯಾಯ ರಾಷ್ಟ್ರ ನಾಯಕರಾಗಿ ಹೊರಹೊಮ್ಮುತ್ತಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಕಂಡರೆ ಬಿಜೆಪಿಯವಿರಿಗೆ ಆತಂಕವಿದೆ. ವಿಶೇಷವಾಗಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕೇಜ್ರಿವಾಲ್ ಕಂಡರೆ ಭಯಗೊಂಡಿದ್ದಾರೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಉತ್ತಮ ಕೆಲಸವನ್ನು ತಡೆಯಲು ಅವರು ಬಯಸಿದ್ದಾರೆ. ಮೊದಲು ಆರೋಗ್ಯ ಸಚಿವರಾಗಿದ್ದ ಸತ್ಯೇಂದರ್ ಜೈನ್ ಅವರನ್ನು ಬಂಧಿಸಲಾಗಿತ್ತು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನನನ್ನು ಬಂಧಿಸಲಾಗುತ್ತದೆ. ಆದರೆ, ನಾವು ಯಾವುದಕ್ಕೂ ಹೆದರುವುದಿಲ್ಲ. ನೀವು ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ. 2024ರ ಲೋಕಸಭಾ ಚುನಾವಣೆ ಎಎಪಿ- ಬಿಜೆಪಿ ನಡುವಣ ಹೋರಾಟವಾಗಿರಲಿದೆ ಎಂದು ಮನೀಶ್ ಸಿಸೋಡಿಯಾ ತಿಳಿಸಿದರು.